Home ಟಾಪ್ ಸುದ್ದಿಗಳು ಪಿಎಸ್ಐ ಅಕ್ರಮ ನೇಮಕ ಪ್ರಕರಣದ ಎಲ್ಲಾ ಬಂಧಿತರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ: ಡಿ.ಕೆ. ಶಿವಕುಮಾರ್...

ಪಿಎಸ್ಐ ಅಕ್ರಮ ನೇಮಕ ಪ್ರಕರಣದ ಎಲ್ಲಾ ಬಂಧಿತರಿಂದ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ: ಡಿ.ಕೆ. ಶಿವಕುಮಾರ್ ಆಗ್ರಹ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಹಿಡಿದು ಗೃಹ ಸಚಿವಾಲಯ, ಪೊಲೀಸ್ ಅಧಿಕಾರಿಗಳ ಕಚೇರಿಗಳ ಪ್ರತಿನಿಧಿಗಳು ಭಾಗಿಯಾಗಿದ್ದು, ಸರ್ಕಾರ ಎಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಹೀಗಾಗಿ ಪ್ರಕರಣದ ಎಲ್ಲ ಬಂಧಿತರಿಂದ ಸೆಕ್ಷನ್ 164 ಪ್ರಕಾರ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ಪಿಎಸ್ಐ ನೇಮಕ ಅಕ್ರಮ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಗುರುವಾರ ಸಾಂಕೇತಿಕ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಿಎಸ್ಐ ಸೇರಿದಂತೆ ಎಲ್ಲ ಇಲಾಖೆಗಳ ನೇಮಕ ಪರೀಕ್ಷೆ ಅಕ್ರಮದ ವಿರುದ್ಧ ಕಾಂಗ್ರೆಸ್ ಇಂದು ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಿಎಸ್ಐ ನೇಮಕ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರಿಂದ ಸಿಆರ್ ಪಿಸಿ ಸೆಕ್ಷನ್ 164 ಪ್ರಕಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಈ ಅಕ್ರಮ ಪ್ರಕರಣದಲ್ಲಿ ಸಚಿವರು ಹಾಗೂ ಅಧಿಕಾರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಬೇಕಾದ ರೀತಿಯಲ್ಲಿ ಬಂಧಿತ 50 ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಕ್ಯಾಮೆರಾಗಳನ್ನು ಬಂದ್ ಮಾಡಿ ಅವರಿಂದ ರಹಸ್ಯವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಯಾರು ಯಾವ ಅಧಿಕಾರಿಗಳನ್ನು ಯಾವ ಕಚೇರಿಯಲ್ಲಿ, ಹೊಟೇಲ್ ನಲ್ಲಿ ಭೇಟಿ ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ಸರ್ಕಾರ ಇದರಲ್ಲಿ ಭಾಗಿಯಾಗಿರುವ ಅಧಿಕಾರಿ ಹಾಗೂ ಸಚಿವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಯಾವ ಸಚಿವರು ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಯನ್ನು ವಿಚಾರಣೆಯಿಂದ ಹೇಗೆ ರಕ್ಷಿಸಿದರು, 20-25 ದಿನಗಳ ನಂತರ ಅದೇ ಸಚಿವರು ಆ ಅಭ್ಯರ್ಥಿಗೆ ಹಣ ಹಿಂದಿರುಗಿಸಲಾಗುವುದು ಎಂದು ಹೇಳಿ ಆತನನ್ನು ಶರಣಾಗತಿ ಮಾಡಿಸಿದ್ದು ನಮಗೆ ಗೊತ್ತು ಎಂದರು.

ಈಗ ಮಾಡಲಾಗಿರುವ ತನಿಖೆಯಿಂದ ನ್ಯಾಯ ಸಿಗುವುದು ಅಸಾಧ್ಯ. ಈ ಪ್ರಕರಣದ ನ್ಯಾಯಾಂಗ ತನಿಖೆ ಆಗಬೇಕು. ಹಗರಣದಲ್ಲಿ ಭಾಗಿಯಾಗಿರುವ ಮಂತ್ರಿಗಳು ಹಾಗೂ ಅಧಿಕಾರಿಗಳ ಬಂಧನವಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ತಿಳಿಸಿದರು.

Join Whatsapp
Exit mobile version