ಆಟೋ ರಿಕ್ಷಾವನ್ನು ಹಾರಿಸಿಕೊಂಡು ಹೋದ ‘ಆಡಿ’ ಕಾರು | ಬೆಚ್ಚಿ ಬೀಳಿಸುವಂತಿದೆ ಅಪಘಾತದ ಭೀಕರ ದೃಶ್ಯ!

Prasthutha|

ಹೈದರಾಬಾದ್: ಇಲ್ಲಿನ ಸೈಬರಾಬಾದ್ ನ ಇನ್ ಆರ್ಬಿಟ್ ಮಾಲ್ ಬಳಿ ನಡೆದ ಭೀಕರ ಅಪಘಾತಕ್ಕೆ ಆಟೋ ರಿಕ್ಷಾವೊಂದು ಹಾರಿ ಹೋದ ಘಟನೆ ನಡೆದಿದೆ. ಅಪಘಾತದಿಂದ ಆಟೋ ರಿಕ್ಷಾದಲ್ಲಿದ್ದ ಪ್ರಯಾಣಿಕನೋರ್ವ ಸಾವನ್ನಪ್ಪಿದ್ದಾಗಿ ಸೈಬರಾಬಾದ್ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನ ಸೈಬರಾಬಾದ್ ಟ್ರಾಫಿಕ್ ಪೊಲೀಸರು ಬಿಡುಗಡೆಗೊಳಿಸಿದ್ದು, ಅಪಘಾತದ ಭೀಕರತೆ ಬೆಚ್ಚಿ ಬೀಳಿಸುವಂತಿದೆ.

- Advertisement -

ಕಳೆದ ಭಾನುವಾರ ಮುಂಜಾನೆ 5.29ರ ವೇಳೆಗೆ ಘಟನೆ ನಡೆದಿದ್ದು, ತನ್ನ ಪಾಡಿಗೆ ಚಲಿಸುತ್ತಿದ್ದ ಆಟೋ ರಿಕ್ಷಾವೊಂದಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಆಡಿ ಕಾರೊಂದು ಬಲಬದಿಯ ಅಂಚಿಗೆ ಡಿಕ್ಕಿ ಹೊಡೆಯುತ್ತಾ ಮುಂದೆ ಸಾಗಿದೆ. ಕಾರು ಅತಿ ವೇಗವಾಗಿ ಆಗಮಿಸಿದ್ದರ ಪರಿಣಾಮ ಆಟೋ ರಿಕ್ಷಾ ಐದಾರು ಬಾರಿ ಪಲ್ಟಿ ಹೊಡೆದು ಬಳಿಕ ರಸ್ತೆಯ ಒಂದು ಬದಿಗೆ ಸರಿದಿರುವುದು ಸೆರೆಯಾಗಿದೆ. ಮಳೆಯೂ ಬರುತ್ತಿದ್ದರಿಂದ ಅಪಘಾತದ ತೀವ್ರತೆ ಸಿಸಿಟಿವಿಯಲ್ಲಿ ಇನ್ನಷ್ಟು ಸ್ಪಷ್ಟವಾಗಿ ಕಾಣುವಂತಾಗಿದೆ.

 ವೀಡಿಯೋ ವೀಕ್ಷಿಸಿ

- Advertisement -

ಆಡಿ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದ, ಅವರೆಲ್ಲರೂ ಯಾವುದೋ ಪಾರ್ಟಿಯಿಂದ ವಾಪಾಸ್ ಆಗುತ್ತಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಮೂವರನ್ನ ದಸ್ತಗಿರಿ ಮಾಡಿರುವ ಪೊಲೀಸರು ಘಟನೆ ಸಂದರ್ಭ ಕಾರು ಚಲಾಯಿಸುತ್ತಿದ್ದ ಆರೋಪಿಯು ಮದ್ಯ ಸೇವಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಯುವಕ ಹಾಗೂ ಆತನ ತಂದೆ ಮತ್ತು ಇನ್ನೋರ್ವ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಮೋಟಾರ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬೇಜವಾಬ್ದಾರಿ, ನಿರ್ಲಕ್ಷ್ಯತನದ ಚಾಲನೆಯಿಂದ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದವರ ಸಾವಿಗೆ ಕಾರಣವಾದ ಆಡಿ ಕಾರು ಚಾಲಕನ ವಿರುದ್ಧ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.



Join Whatsapp