ಮಂಗಳೂರು ಉತ್ತರದಲ್ಲಿ ಅತಿ ಹೆಚ್ಚು, ಉಳ್ಳಾಲ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರು
ಮಂಗಳೂರು: ಡಿಸೆಂಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಮತದಾರರ ಕರಡು ಮತದಾರರ ಪಟ್ಟಿ ಸಿದ್ಧವಾಗಬೇಕು. ಹದಿನೇಳುವರೆ ಲಕ್ಷ ಮತದಾರರು ಈ ಎಂಟು ಕ್ಷೇತ್ರಗಳಲ್ಲಿ ಇದ್ದು, ಮಂಗಳೂರು ಉತ್ತರದಲ್ಲಿ ಅತಿ ಹೆಚ್ಚು ಹಾಗೂ ಉಳ್ಳಾಲ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಆದ ಬಳಿಕ ಮೊದಲ ಬಾರಿಗೆ ಪತ್ರಕರ್ತರನ್ನು ಭೇಟಿ ಮಾಡಿ ಮಾತನಾಡಿದರು.
ಈ ಬಾರಿ ಜಿಲ್ಲೆಯಲ್ಲಿ 70 ಸಾವಿರದಷ್ಟು ಮತದಾರರ ಸಂಖ್ಯೆ ಕಡಿಮೆ ಆಗಿದೆ. ಆ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 8ರ ವರೆಗೆ ಅವಕಾಶವಿದೆ. ಹದಿನೆಂಟು ಪ್ರಾಯದ ಹೊಸ ಮತದಾರರ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 26ರವರೆಗೆ ಅವಕಾಶವಿದೆ. ಅಂತಿಮವಾಗಿ ಜನವರಿ 5ರಂದು ಪರಿಷ್ಕೃತ ಮತದಾರರ ಪಟ್ಟಿ ಪ್ರಕಟವಾಗುತ್ತದೆ ಎಂದು ರವಿಕುಮಾರ್ ತಿಳಿಸಿದರು.
ಹದಿನೆಂಟು ವರ್ಷ ಆಗುವವರೆಗೆ ಹೊಸಬರು ಮತದಾರರ ಪಟ್ಟಿಗೆ ಬರಲು ಅವಕಾಶ ಇರಲಿಲ್ಲ. ಈಗ ಚುನಾವಣಾ ಆಯೋಗವು ನಾಲ್ಕು ದಿನಾಂಕಗಳನ್ನು ನೀಡಿದ್ದು, 17 ಪ್ರಾಯ ದಾಟಿದವರು ಅರ್ಜಿ ಸಲ್ಲಿಸಬಹುದು. ಅದರ ಅನುಸಾರ 18 ಪ್ರಾಯ ಆಗುವವರು ಮತದಾರರ ಪಟ್ಟಿಗೆ ಸೇರಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
ಆಧಾರ್ ಗೆ ವೋಟರ್ ಐಡಿ ಲಿಂಕ್ ಮಾಡುವ ಕೆಲಸ ನಡೆದಿದೆ. ಜಿಲ್ಲೆಯಲ್ಲಿ 70% ಮಾತ್ರ ಆಗಿದೆ. ಅದು ಆಗದಿರಲು ನಾವು ನಾನಾ ಊರಿಗೆ ವಲಸಿಗರಾಗುವುದರಿಂದ 100% ಆಧಾರ್ ಮತ್ತು ವೋಟರ್ ಐಡಿ ಲಿಂಕ್ ಆಗುತ್ತಿಲ್ಲ. ಆದರೂ ಕೆಲಸ ನಡೆದಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದರು.
ವಿದ್ಯಾರ್ಥಿಗಳು ಓದುವಲ್ಲಿ ಮತ್ತು ಊರಲ್ಲಿ ಓಟು ಹಾಕುವ ಸಮಸ್ಯೆ ನಿವಾರಿಸಲು ಹೊಸ ಆಪ್ ಬಂದಿದ್ದು, ಅವ್ಯವಹಾರ ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರಿಸುತ್ತ ಹೇಳಿದರು.
ಹಳೆಯ ವಿಳಾಸದಿಂದ ಹೊಸ ವಿಳಾಸಕ್ಕೆ ಈಗ ವರ್ಗಾವಣೆ ನಡೆಸಲು ಏಜೆನ್ಸಿ ಇದೆ. ದೂರುಗಳು ಇವೆ, ನಿಧಾನವಾಗಿಯಾದರೂ ಸರಿಪಡಿಸಲಾಗುವುದು ಎಂದು ಅವರು ವಿವರಿಸಿದರು.
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2022 ರ ಅಂತಿಮ ಮತದಾರರ ಪಟ್ಟಿಯ ನಂತರ ಒಟ್ಟು 29,410 ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದು, 73,783 ಹೆಸರುಗಳನ್ನು ತೆಗೆದು ಹಾಕಲಾಗಿದೆ. ಪ್ರಸ್ತಾಪಿತ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ಯುವ ಮತದಾರರ ಸಂಖ್ಯೆಯು 25,341 ರಷ್ಟಿದ್ದು, ಕಳೆದ ಬಾರಿಯ 2022 ರ ಅಂತಿಮ ಮತದಾರರ ಪಟ್ಟಿಯಲ್ಲಿನ 14,780 ಸಂಖ್ಯೆಗೆ ಹೋಲಿಸಿದರೆ, ಯುವ ಮತದಾರರ ಸಂಖ್ಯೆಯಲ್ಲಿ ಒಟ್ಟು 10,561 ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
2011 ಜನಗಣತಿಯ ಅನುಸಾರ ಜಿಲ್ಲೆಯಲ್ಲಿ ಲಿಂಗ ಅನುಪಾತವು 1020 ಇದ್ದು, ಪ್ರಸ್ತುತ ಕರಡು ಮತದಾರರ ಪಟ್ಟಿಯ ಅನುಸಾರ ಲಿಂಗ ಅನುಪಾತವು (Gender Ratio) ಶೇಕಡ 1040 ಆಗಿದೆ. ಪ್ರಸ್ತಾವಿತ ಕರಡು ಮತದಾರರ ಪಟ್ಟಿ 2023 ರ ಪ್ರಕಾರ ಜಿಲ್ಲೆಯಲ್ಲಿ ಮತದಾರರ ಸಂಖ್ಯೆಯ ಅನುಪಾತವು ಒಟ್ಟು ಜನಸಂಖ್ಯೆಗೆ (EP Ratio) ಶೇಕಡ 72.48 ಆಗಿದೆ. ಕರಡು ಮತದಾರರ ಪಟ್ಟಿ 2023 ರಲ್ಲಿ ಫೋಟೋ ಕವರೇಜ್ ಶೇಕಡ 100 ಆಗಿದೆ ಎಂದು ರವಿಕುಮಾರ್ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಸಹ ಉಪಸ್ಥಿತರಿದ್ದರು.