ಬೆಂಗಳೂರು, ಜು.22: ತಾವು ಅಧಿಕಾರ ಸ್ವೀಕರಿಸಿ ಇದೇ 26 ಕ್ಕೆ ಎರಡು ವರ್ಷ ಪೂರ್ತಿಯಾಗಲಿದೆ. ಅಂದು ಕೇಂದ್ರದಿಂದ ಬರುವ ಸೂಚನೆಯನ್ನು ಪಾಲಿಸಲು ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಮೂಲಕ ಅವರು ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಪರೋಕ್ಷ ಸಂದೇಶ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ 75 ವರ್ಷ ಮೀರಿದ ಯಾರಿಗೂ ಬಿಜೆಪಿಯಲ್ಲಿ ಅಧಿಕಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಜೆ.ಪಿ. ನಡ್ಡಾ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದಾರೆ. ಜುಲೈ 26ರಂದು ಸರ್ಕಾರ ಎರಡು ವರ್ಷ ಪೂರೈಸಲಿದೆ. ಅಂದು ಹೈಕಮಾಂಡ್ ಯಾವ ಸಂದೇಶ ಕಳುಹಿಸುತ್ತದೋ ಅದನ್ನು ನಾನು ಪಾಲಿಸುತ್ತೇನೆ. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.
ಬಿಜೆಪಿಯ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ರಾಜ್ಯದ ವಿವಿಧ ಮಠಾಧೀಶರು ನನ್ನ ಬಗ್ಗೆ ತೋರಿಸಿದ ವಿಶೇಷ ಕಾಳಜಿಗೆ ಧನ್ಯವಾದಗಳು. ಮಠಾಧೀಶರು ನನಗೆ ಬೆಂಬಲ ಕೊಟ್ಟು ಆಶೀರ್ವದಿಸಿದ್ದಾರೆ. ಇಂಥ ಬೆಂಬಲ, ಆಶೀರ್ವಾದ ಹಿಂದೆ ಯಾರಿಗೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಗುರಿಯಾಗಿದೆ. ಪಕ್ಷದ ಹೈಕಮಾಂಡ್ ನನಗೆ ಯಾವ ಸೂಚನೆ ನೀಡಿದರೂ ಪಾಲಿಸುತ್ತೇನೆ. ನನ್ನ ಪರವಾಗಿ ಯಾರೂ ಸಹ ಹೇಳಿಕೆ ನೀಡುವುದು ಬೇಡ. ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸದಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.