ಮ್ಯಾನೇಜ್‍’ಮೆಂಟ್ ಕೋಟಾದ ಎಂಜಿನಿಯರಿಂಗ್ ಪ್ರವೇಶಕ್ಕೆ ರಾಷ್ಟ್ರ ಮಟ್ಟದ ಸಿಇಟಿ ನಡೆಸಲು ಸಿದ್ಧ: ಸಚಿವ ಅಶ್ವತ್ಥನಾರಾಯಣ

Prasthutha|

ಬೆಂಗಳೂರು: ರಾಜ್ಯದ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳು, ತಮ್ಮ ಮ್ಯಾನೇಜ್‍ಮೆಂಟ್ ಕೋಟಾದ ಎಂಜಿನಿಯರಿಂಗ್ ಸೀಟುಗಳ ಭರ್ತಿಗೆ ಸದ್ಯ ಪ್ರತ್ಯೇಕವಾದಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಹೀಗಾಗಿ ಎಲ್ಲ ವಿ.ವಿಗಳೂ ಒಪ್ಪುವುದಾದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ರಾಷ್ಟ್ರ ಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಸರ್ಕಾರ ಸಿದ್ಧ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ತಿಳಿಸಿದರು.

- Advertisement -

ವಿಕಾಸಸೌಧದಲ್ಲಿ ನಡೆದ ಎಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ರಾಜ್ಯದ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಾಧಿಪತಿಗಳು ಮತ್ತು ರಿಜಿಸ್ಟ್ರಾರ್‍ಗಳ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳನ್ನು ಸಿಇಟಿ ರ್ಯಾಂಕ್ ಮೇಲೆ ಖಾಸಗಿ ವಿ.ವಿಗಳು ಭರ್ತಿ ಮಾಡಿಕೊಳ್ಳುತ್ತಿವೆ. ಆದರೆ, ಶೇ 60ರಷ್ಟು ಮ್ಯಾನೇಜ್‍ಮೆಂಟ್ ಸೀಟುಗಳನ್ನು ತಮ್ಮದೇ ಪ್ರತ್ಯೇಕ ಸಿಇಟಿ ಮೂಲಕ ವಿವಿಗಳು ಭರ್ತಿ ಮಾಡಿಕೊಳ್ಳುತ್ತಿವೆ. ಈ ರೀತಿ ಪ್ರತ್ಯೇಕ ಸಿಇಟಿಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಇದರ ಜತೆಗೆ ಒಂದೇ ಸಿಇಟಿ ಮಾಡಿ ಎನ್ನುವ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಕೂಡ ವ್ಯಕ್ತಪಡಿಸಿದೆ. ಹೀಗಾಗಿ ನೀವೇ ಬೇಕಾದರೆ ಎಲ್ಲ ವಿವಿಗಳು ಸೇರಿಕೊಂಡು ಪ್ರತ್ಯೇಕ ಸಿಇಟಿ ಮಾಡಿಕೊಳ್ಳಿ ಎಂದು ಅಶ್ವಥ್ ನಾರಾಯಣ ಸಲಹೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ ಜವಾಹರ ಅವರು, ಕೆಇಎ ಅವರು ರಾಷ್ಟ್ರಮಟ್ಟದ ಪರೀಕ್ಷೆ ನಡೆಸದ ಕಾರಣಕ್ಕೆ ನಾವು ನಮ್ಮದೇ ಆದಂತಹ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಈಗ ಕೆಇಎ ಯಿಂದಲೇ ರಾಷ್ಟ್ರ ಮಟ್ಟದಲ್ಲಿ ಒಂದೇ ಸಿಇಟಿ ಮಾಡುವುದಾದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದರು. ಆಗ ಸಚಿವರು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಿದರು. ಆದರೆ, ಈ ಬಗ್ಗೆ ಎಲ್ಲ ವಿಶ್ವವಿದ್ಯಾಲಯಗಳು ಒಂದೇ ವೇದಿಕೆಯಲ್ಲಿ ಸೇರಿ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರಕ್ಕೆ ಬಂದರೆ ಸೂಕ್ತ ಎನ್ನುವ ಸಲಹೆಯನ್ನು ನೀಡಿದರು.

- Advertisement -

ಸದ್ಯದಲ್ಲೇ ಈ ಕುರಿತು ಪ್ರತ್ಯೇಕ ಸಭೆಗಳನ್ನು ನಡೆಸುವಂತೆಯೂ ಸಚಿವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ ಅವರಿಗೆ ಸೂಚಿಸಿದರು. ಕೆಲವು ವಿಶ್ವವಿದ್ಯಾಲಯಗಳು ಸರ್ಕಾರಿ ಕೋಟಾದ ಸೀಟುಗಳಿಗೆ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸಚಿವರು ಎಚ್ಚರಿಕೆ ನೀಡಿದರು. ಕೆಲವು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಪರೀಕ್ಷೆ ಶುಲ್ಕವನ್ನು ಪಡೆದಿರುವುದು ಬಿಟ್ಟರೆ ಬೇರೆ ಏನೂ ಪಡೆದಿಲ್ಲ ಎನ್ನುವ ಸಮಜಾಯಿಷಿ ನೀಡಿದರು. ಆದರೆ, ಇದನ್ನು ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರ ಸಮಗ್ರವಾದಂತಹ ಹೊಸ ವಿಶ್ವವಿದ್ಯಾಲಯ ಕಾಯ್ದೆಯನ್ನು ತರುತ್ತಿದ್ದು, ಅದರ ಕರಡನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು ಸಮಗ್ರವಾಗಿ ಅಧ್ಯಯನ ಮಾಡಿ ಏನಾದರೂ ಸಲಹೆಗಳು ಇದ್ದರೆ ಕೊಡಬಹುದು ಎಂದು ಹೇಳಿದರು.

ಕುಲಪತಿಗಳ ಸಭೆ:

ಈ ಸಭೆಗೂ ಮುನ್ನ ಸಚಿವರು ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆಗೂ ಸಭೆ ನಡೆಸಿ, ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು (ಯುಯುಸಿಎಂಎಸ್) ಎಲ್ಲ ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕು. ಜುಲೈ 5ರಿಂದ ಇದೇ ವ್ಯವಸ್ಥೆಯಡಿ ಪ್ರವೇಶ ಪ್ರಕ್ರಿಯೆ ನಡೆಸಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



Join Whatsapp