ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಫ್ರಾಂಚೈಸಿಯನ್ನು ಮಾರಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ತಳ್ಳಿಹಾಕಿದೆ.
ಆರ್ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿ ಶುದ್ಧ ಸುಳ್ಳು, ಊಹಾಪೋಹ ಅಷ್ಟೇ. ತಂಡವನ್ನು ಮಾರಾಟ ಮಾಡುತ್ತಿಲ್ಲ ಎಂದು ಆರ್ಸಿಬಿಯ ಮಾಲಕಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಆರ್ಸಿಬಿ ತಂಡವನ್ನು ಪೂರ್ಣವಾಗಿಯಾಗಲೀ, ಭಾಗಶಃ ಆಗಿಯಾಗಲೀ ಮಾರಾಟ ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ.
ಕೇಂದ್ರ ಸರ್ಕಾರವು ಕ್ರೀಡಾಕೂಟಗಳಲ್ಲಿ ತಂಬಾಕು ಮತ್ತು ಮದ್ಯ ಉತ್ಪನ್ನಗಳ ಪ್ರಚಾರ ಮತ್ತು ಜಾಹೀರಾತು ನಡೆಯದಂತೆ ನಿರ್ಬಂಧಿಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿಯನ್ನು ಮಾರುವ ಪರಿಶೀಲನೆಯಲ್ಲಿ ಡಿಯಾಜಿಯೋ ಇದೆ ಎನ್ನುವಂತಹ ಸುದ್ದಿಯನ್ನು ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆ ಪ್ರಕಟಿಸಿತ್ತು.
ಆರ್ಸಿಬಿಯ ಮಾಲೀಕನಾಗಿರುವ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಬ್ರಿಟನ್ ಮೂಲದ ಡಿಯಾಜಿಯೋದ ಅಂಗಸಂಸ್ಥೆಯಾಗಿದೆ.
ಬ್ಲೂಮ್ಬರ್ಗ್ ವರದಿ ಪ್ರಕಾರ, ಡಿಯಾಜಿಯೋ ಸಂಸ್ಥೆಯು ಆರ್ಸಿಬಿಗೆ 2 ಬಿಲಿಯನ್ ಡಾಲರ್ (17,000 ಕೋಟಿ ರೂ) ಮೊತ್ತದ ವ್ಯಾಲ್ಯುಯೇಶನ್ ನಿರೀಕ್ಷಿಸುತ್ತಿದೆ ಎನ್ನಲಾಗಿತ್ತು.
ಐಪಿಎಲ್ನ ಆರಂಭದಲ್ಲಿ ಇದ್ದ ಎಂಟು ತಂಡಗಳಲ್ಲಿ ಆರ್ಸಿಬಿಯೂ ಒಂದು. ಮೊದಲಿಗೆ ವಿಜಯ್ ಮಲ್ಯ ಒಡೆತನದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಇತ್ತು. ಯುನೈಟೆಡ್ ಸ್ಪಿರಿಟ್ಸ್ ಅನ್ನು ಬ್ರಿಟನ್ ಮೂಲದ ಡಿಯಾಜಿಯೋ ಖರೀದಿ ಮಾಡಿತು. ಆ ಬಳಿಕ ಆರ್ಸಿಬಿ ಮಾಲಕತ್ವವು ಡಿಯಾಜಿಯೋ ಕೈಗೆ ಹೋಗಿತ್ತು. 2008ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜ್ಸ್ ತಂಡ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆದಿದೆ.