ನವದೆಹಲಿ: ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕನ ಸ್ಥಾನದಿಂದ ಬದಲಾಯಿಸಿದ BCCI ಕ್ರಮ ವ್ಯಾಪಕ ಟೀಕೆಗೆ ಗುರಿಯಾಗುತ್ತಿರುವ ಬೆನ್ನಲ್ಲೇ BCCIನಲ್ಲಿ ತಂಡದ ಹಿತದೃಷ್ಟಿಗಿಂತಲೂ ಕೆಲವರ ವೈಯಕ್ತಿಕ ನಿರ್ಧಾರಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬುದನ್ನು ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪರೋಕ್ಷವಾಗಿ ಹೇಳಿದ್ದಾರೆ.
ಪ್ರಮುಖ ಆಂಗ್ಲ ದಿನಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕೋಚ್ ಅವಧಿಯ ಕೆಲವೊಂದು ಮಹತ್ವದ ವಿಚಾರಗಳನ್ನು ರವಿಶಾಸ್ತ್ರಿ ಹಂಚಿಕೊಂಡಿದ್ದಾರೆ. ‘ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ನನಗೆ ದೊರೆಯದಂತೆ ಕೆಲವರು ತೆರೆಮರೆಯಲ್ಲಿ ಭಾರೀ ಪ್ರಯತ್ನ ನಡೆಸಿದ್ದರು. ನಾನು BCCI ಕಡೆಗೆ ಬೆರಳು ತೋರಿಸುತ್ತಿಲ್ಲ, ಆದರೆ ಕೆಲ ಸದಸ್ಯರ ವಿರೋಧ ಕಟ್ಟಿಕೊಂಡಿದ್ದೆ’ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಆದರೆ ಆ ಸದಸ್ಯರ ಹೆಸರನ್ನು ಶಾಸ್ತ್ರಿ ಪ್ರಸ್ತಾಪಿಸಿಲ್ಲ.
ಆ ಸದಸ್ಯರ ವಿರೋಧ ತಾನು ಕೋಚ್ ಆಗುವುದಕ್ಕಷ್ಟೇ ಮಾತ್ರ ಸೀಮಿತವಾಗಿರಲಿಲ್ಲ. ಜೊತೆಗೆ ಟೀಮ್ ಇಂಡಿಯಾದ ಬೌಲಿಂಗ್ ಆಗಿ ಭರತ್ ಅರುಣ್ ಅವರನ್ನು ನೇಮಿಸಲು ‘ಆ ಜನರು’ ಬಯಸಿರಲಿಲ್ಲ. ಆದರೆ ಭಾರತದ ಬೌಲಿಂಗ್ ತರಬೇತುದಾರರಾಗಿ ಭರತ್ ಅರುಣ್ ಮಾಡಿರುವ ಸಾಧನೆಯನ್ನು ಈ ಹಿಂದೆ ಯಾರೂ ಮಾಡಿರಲಿಲ್ಲ ಎಂದು ಹಿಂದಿನ ಘಟನೆಗಳನ್ನು ರವಿಶಾಸ್ತ್ರಿ ಮೆಲುಕು ಹಾಕಿದ್ದಾರೆ.
2019ರ ಏಕದಿನ ವಿಶ್ವಕಪ್’ಗೆ ತಂಡವನ್ನು ಘೋಷಣೆ ಮಾಡಿದಾಗ ನನಗೆ ಅಚ್ಚರಿಯಾಗಿತ್ತು. ಆ ತಂಡದಲ್ಲಿ ಎಂ.ಎಸ್ ಧೋನಿ, ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್’ಗೆ ಸ್ಥಾನ ನೀಡಲಾಗಿತ್ತು. ಒಂದೇ ತಂಡದಲ್ಲಿ ಮೂವರು ವಿಕೆಟ್ ಕೀಪರ್’ಗಳನ್ನು ಹೊಂದುವ ಅನಿವಾರ್ಯತೆ ಏನಿತ್ತು? ಇದು ಅತ್ಯಂತ ವಿಚಿತ್ರವಾದ ಆಯ್ಕೆಯಾಗಿತ್ತು. ಈ ಮೂವರಲ್ಲಿ ಒಬ್ಬರ ಸ್ಥಾನಕ್ಕೆ ಅಂಬಾಟಿ ರಾಯುಡು ಅಥವಾ ಶ್ರೇಯಸ್ ಐಯ್ಯರ್ ಅವರನ್ನು ಆಯ್ಕೆ ಮಾಡಬಹುದಾಗಿತ್ತು ಎಂದು ರವಿಶಾಸ್ತ್ರಿ ಹೇಳಿದ್ದಾರೆ.
2017ರಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಮನಸ್ತಾಪದ ಬಳಿಕ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ್ದರು. ಆ ವೇಳೆ ಆ ಸ್ಥಾನಕ್ಕೆ ಬಂದ ರವಿಶಾಸ್ತ್ರಿ, ಮುಂದಿನ ಎರಡು ವರ್ಷಗಳ ಕಾಲ ಟೀಂ ಇಂಡಿಯಾ ಕೋಚ್ ಆಗಿದ್ದರು ಬಳಿಕ 2019ರಲ್ಲಿ ರವಿಶಾಸ್ತ್ರಿ, ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮರುನೇಮಕವಾಗಿದ್ದರು. ಇತ್ತೀಚೆಗಷ್ಟೇ UAEಯಲ್ಲಿ ಮುಕ್ತಾಯಗೊಂಡ ಟಿ-20 ವಿಶ್ವಕಪ್ ರವಿಶಾಸ್ತ್ರಿ ಪಾಲಿಗೆ ಕೊನೇಯ ಸರಣಿಯಾಗಿತ್ತು.
ರವಿಶಾಸ್ತ್ರಿ ಅವಧಿಯಲ್ಲಿ ಟೀಮ್ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಆದರೆ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿತ್ತು. ಜೊತೆಗೆ ಹೆಚ್ಚಿನ ದ್ವಿಪಕ್ಷೀಯ ಸರಣಿಗಳನ್ನು ಗೆಲ್ಲುವಲ್ಲಿ ಶಾಸ್ತ್ರಿ ಕಾರ್ಯತಂತ್ರ ಕೆಲಸ ಮಾಡಿತ್ತು.