ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರ ಮುಷ್ಕರ ವಾಪಸ್: ಆರೋಗ್ಯ ಸೇವೆ ಸುಗಮ ಕಾರ್ಯಾಚರಣೆ

Prasthutha|

ಬೆಂಗಳೂರು: ಮುಷ್ಕರ ನಿರತರಾಗಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರು ತಮ್ಮ ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿದ್ದು, ಸಾರ್ವಜನಿಕ ಆರೋಗ್ಯಸೇವೆಗಳು ಸುಗಮವಾಗಿ ಕಾರ್ಯಾಚರಣೆಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಒಟ್ಟು 30,574 ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಳಗುತ್ತಿಗೆ ನೌಕರರ ಸಂಘವು ವಿವಿಧ ಬೇಡಿಕೆಗಳ ಕುರಿತು ಫೆ.13, 2023 ರಿಂದ ಪ್ರತಿಭಟನೆ ನಡೆಸುತ್ತಿತ್ತು. ಈಗಾಗಲೇ ಸರ್ಕಾರವು ಹಲವು ಬೇಡಿಕೆಗಳನ್ನು ಈಡೇರಿಸಿದ್ದು, ಅದರಲ್ಲಿ ಪ್ರಮುಖ ಬೇಡಿಕೆಯಾದ, ವೇತನದಲ್ಲಿ 15% ಹೆಚ್ಚಳ ಮಾಡುವ ಬಗ್ಗೆ ಮಾರ್ಚ್ 4, 2023 ರಂದು ಆದೇಶ ಹೊರಡಿಸಿದೆ. ಉಳಿದ ಬೇಡಿಕೆಗಳ ಬಗ್ಗೆ ಪರಿಗಣಿಸುವುದಾಗಿ ಮುಖ್ಯ ಮಂತ್ರಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಆಶ್ವಾಸನೆ ನೀಡಿದ್ದಾರೆ. ಆದಾಗ್ಯೂ, ಹುದ್ದೆಗಳನ್ನು ಖಾಯಂಗೊಳಿಸುವಂತೆ ಪಟ್ಟು ಹಿಡಿದು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದಾರೆ. ಈ ವಿಷಯದ ಕುರಿತು ಬೇರೆ ರಾಜ್ಯಗಳನ್ನು ಸಂಪರ್ಕಿಸಲಾಗಿದ್ದು, ಮಣಿಪುರ ರಾಜ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳಲ್ಲಿ ಹುದ್ದೆಗಳನ್ನು ಖಾಯಂಗೊಳಿಸಿರುವುದು ಕಂಡುಬಂದಿಲ್ಲ.
ಮಾರ್ಚ್ 16, 2023ರಂದು ಪ್ರತಿಭಟನೆಯನ್ನು ನಿಲ್ಲಿಸಿ 48 ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಎಚ್ಚರಿಕೆ ನೋಟೀಸನ್ನು ಜಾರಿಗೊಳಿಸಿದಾಗ್ಯೂ ಮುಷ್ಕರ ಮುಂದುವರೆಸಿದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿ ESMA Act ಅನ್ನು ಜಾರಿಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಅವರ ನೇತೃತ್ವದಲ್ಲಿ ತುರ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸಭೆಯನ್ನುಏರ್ಪಡಿಸುವಂತೆ ಸೂಚಿಸಿ, 48 ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳನ್ನು ವಜಾಗೊಳಿಸುವ ಕುರಿತು ನಿರ್ಣಯ ಕೈಗೊಳ್ಳುವಂತೆ ಹಾಗೂ ವಜಾಗೊಳಿಸಿದ ಸಿಬ್ಬಂದಿಗಳಿಂದ ತೆರವಾದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ತಿಳಿಸಿದ್ದರು.
ಅಂತಿಮವಾಗಿ, ಎಲ್ಲಾ ಜಿಲ್ಲೆಗಳಿಂದ ಪ್ರತಿಭಟನಾನಿರತ ಎನ್.ಎಚ್.ಎಂ. ಸಿಬ್ಬಂದಿಗಳ ಹಾಜರಾತಿಯನ್ನು ಪಡೆಯಲಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಪೂರ್ಣಪ್ರಮಾಣದ (100%) ಹಾಜರಾತಿಯಿರುವುದು ತಿಳಿದುಬಂದಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಸಿಬ್ಬಂದಿಗಳು ನಿಧಾನವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಸಾರ್ವಜನಿಕ ಆರೋಗ್ಯಸೇವೆಗಳು ಸುಗಮವಾಗಿ ಕಾರ್ಯಾಚರಣೆಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಆಡಳಿತಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp