ಬಿಲಾಸಪುರ: ಹದಿನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೇವಮಾನವ ಎನಿಸಿಕೊಂಡ ಕುಲೇಶ್ವರ ಸಿಂಗ್ ರಜಪೂತ್ ಅಲಿಯಾಸ್ ಪಂಡಿತ್ ಠಾಕೂರ್ ಮತ್ತು ಅವರ ಸಹಚರರಾದ ಗಣೇಶ್ ಸಾಹು, ಧನಿಯಾ ಬಂಜಾರೆ, ಕನ್ಹಯ್ಯ ಹಾಗೂ ಹುಲ್ಸಿ ರಾತ್ರೆ ಎಂಬ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಛತ್ತೀಸಗಢದ ಬಿಲಾಸಪುರ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಅರ್ಚನಾ ಝಾ ತಿಳಿಸಿದ್ದಾರೆ.
ಸಂತ್ರಸ್ತೆಯರ ಪೋಷಕರನ್ನು ಭೇಟಿಯಾಗಿದ್ದ ಧನಿಯಾ ಬಂಜಾರೆ ಮತ್ತು ಹುಲ್ಸಿ ರಾತ್ರೆ, ಬಿಲಾಸಪುರದಲ್ಲಿ ನಡೆಯಲಿರುವ ರಜಪೂತರ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾದರೆ ಹಣ ನೀಡುವುದಾಗಿ ಭರವಸೆಯ ಆಮಿಷವೊಡ್ಡಿ ಕರೆಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜ.11ರಂದು ಬಾಲಕಿಯರೊಟ್ಟಿಗೆ ಕುಟುಂಬದವರು ಬಿಲಾಸಪುರದ ರತನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇವಮಾನವ ಎನಿಸಿಕೊಂಡ ಪಂಡಿತ್ ಠಾಕೂರ್ ಸಹಚರ ಗಣೇಶ್ ಸಾಹು ಮನೆಗೆ ಹೋಗಿದ್ದರು. ಆಗ ಪಂಡಿತ್ ರಜಪೂತ್ ಬಾಲಕಿಯರ ಮೇಲೆ ಅಲ್ಲಿ ಅತ್ಯಾಚಾರ ಎಸಗಿದ್ದಾನೆ. ನಂತರ ಪಂಡಿತ್ ರಜಪೂತ್ ಎರಡು ಕುಟುಂಬಕ್ಕೆ ₹2 ಸಾವಿರ, ₹4 ಸಾವಿರ ನೀಡಿದ್ದಾನೆ. ಬಾಲಕಿಯರು ಮನೆಗೆ ಮರಳುವಾಗ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ರತನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.