Home ಕ್ರೀಡೆ ರಣಜಿ ಟ್ರೋಫಿ: ಕರ್ನಾಟಕದ ಸೆಮಿಫೈನಲ್ ಕನಸು ಭಗ್ನ

ರಣಜಿ ಟ್ರೋಫಿ: ಕರ್ನಾಟಕದ ಸೆಮಿಫೈನಲ್ ಕನಸು ಭಗ್ನ

ಬೆಂಗಳೂರು: ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿ ʼರಣಜಿ ಟ್ರೋಫಿʼಯಲ್ಲಿ ಅತಿಥೇಯ ಕರ್ನಾಟಕ ತಂಡವನ್ನು ಐದು ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ ಉತ್ತರ ಪ್ರದೇಶ, ಸೆಮಿಫೈನಲ್ ಪ್ರವೇಶಿಸಿದೆ. ಮನೀಷ್ ಪಾಂಡೆ ಸಾರಥ್ಯದ ಕರ್ನಾಟಕ ತಂಡದ ಈ ಬಾರಿಯ ರಣಜಿ ಪಯಣ ಕ್ವಾರ್ಟರ್ ಫೈನಲ್ನಲ್ಲೇ ಅಂತ್ಯಕಂಡಿದ್ದು, ಕನ್ನಡಿಗರ ರಣಜಿ ಟ್ರೋಫಿ ಕನಸು, ಸತತ ಏಳನೇ ಬಾರಿಯೂ ಭಗ್ನಗೊಂಡಿದೆ.


ಬೆಂಗಳೂರಿನ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯ ಮೂರನೇ ದಿನಕ್ಕೆ ಮುಕ್ತಾಯಕಂಡಿದೆ. ಎರಡನೇ ದಿನದಾಟದ ಮುಕ್ತಾಯಕ್ಕೆ 8 ವಿಕೆಟ್ ನಷ್ಟದಲ್ಲಿ 100 ರನ್ ಗಳಿಸಿದ್ದ ಕರ್ನಾಟಕ, ಬುಧವಾರ ಕೇವಲ 14 ರನ್ ಸೇರಿಸುವಷ್ಟರಲ್ಲಿಯೇ ಸರ್ವಪತನ ಕಂಡಿತ್ತು. 213 ರನ್ ಗಳ ಗೆಲುವಿನ ಗುರಿ ಪಡೆದ ಉತ್ತರಪ್ರದೇಶ, 65.2 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು.


ಸುಲಭ ಸವಾಲನ್ನು ನಿಯಂತ್ರಿಸಬೇಕಾದ ಒತ್ತಡಕ್ಕೆ ಸಿಲುಕಿದ್ದ ಕರ್ನಾಟಕದ ಬೌಲರ್ಗಳು ಆರಂಭದಲ್ಲೇ ಎದುರಾಳಿ ತಂಡದ ಸಮರ್ಥ್ ಸಿಂಗ್ (14) ಮತ್ತು ಆರ್ಯನ್ ಜುಯೆಲ್ (1) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಪಾಂಡೆ ಪಾಳಯದಲ್ಲಿ ಗೆಲುವಿನ ಭರವಸೆ ಮೂಡಿತ್ತು. ಆದರೆ ನಾಲ್ಕನೇ ವಿಕೆಟ್ಗೆ ಜೊತೆಯಾದ ಪ್ರಿಯಾಂ ಗರ್ಗ್ ಮತ್ತು ನಾಯಕ ಕರಣ್ ಶರ್ಮಾ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಪ್ರಿಯಾಂ ಗರ್ಗ್ 60 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನೊಂದಿಗೆ 52 ರನ್ ಗಳಿಸಿದ್ದ ವೇಳೆ ಗೌತಮ್ಗೆ ವಿಕೆಟ್ ಒಪ್ಪಿಸಿದರು.


ಮತ್ತೊಂದೆಡೆ ನಾಯಕನ ಜವಾಬ್ದಾರಿಯನ್ನು ಅರಿತು, ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಕರಣ್ ಶರ್ಮಾ, 93 ರನ್ ಗಳಿಸಿ ಅಜೇಯರಾಗುಳಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಕರಣ್ ಪಾಲಾಯಿತು. 163 ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್ ಶರ್ಮಾ ಇನಿಂಗ್ಸ್ 13 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು.


ಪ್ರಿಯಾಂ ಗರ್ಗ್ ವಿಕೆಟ್ ಪತನದ ನಂತರದಲ್ಲಿ ಕ್ರೀಸ್ಗಿಳಿದ ರಿಂಕು ಸಿಂಗ್ (4) ಮತ್ತು ಧ್ರುವ್ ಜುರೆಲ್ (9) ಆತುರದಲ್ಲಿ ವಿಕೆಟ್ ಒಪ್ಪಿಸಿದರೂ, ಕರಣ್ ಶರ್ಮಾ ಜೊತೆಯಾದ ಪ್ರಿನ್ಸ್ ಯಾದವ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಲಿಂಗ್ನಲ್ಲಿ ಕರ್ನಾಟಕದ ಪರ ವಿಜಯ ಕುಮಾರ್ ವೈಶಾಕ್ 47 ರನ್ ನೀಡಿ ಮೂರು ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ ಮತ್ತು ಕೃಷ್ಣಪ್ಪ ಗೌತಮ್ ತಲಾ ಒಂದು ವಿಕೆಟ್ ಪಡೆದರು.

Join Whatsapp
Exit mobile version