ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನನ್ನು ಬಂಧಿಸದಂತೆ ಎಸ್‌ಐಟಿ ಗೆ ನಿರ್ದೇಶಿಸಬೇಕು ಎಂದು ಕೋರಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ರಮೇಶ್ ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಯುವತಿ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿತ್ತು.
ಇನ್ನು ವಿಚಾರಣೆ ವೇಳೆ ಯುವತಿ ಪರ ವಕೀಲ ಸಂಕೇತ್ ಏಣಗಿ ವಾದ ಮಂಡಿಸಿ, ಅತ್ಯಾಚಾರ ಆರೋಪ ಸಂಬಂಧ ಯುವತಿ ದಾಖಲಿಸಿದ ದೂರಿನ ಸಂಬಂಧ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ತನಿಖಾಧಿಕಾರಿಗಳು ಬಂಧಿಸಿಲ್ಲ. ಆದರೆ ರಮೇಶ್ ಜಾರಕಿಹೊಳಿ ದಾಖಲಿಸಿರುವ ದೂರಿನ ಸಂಬಂಧ ಯುವತಿಯನ್ನು ಬಂಧಿಸುವ ಸಾಧ್ಯತೆಯಿದ್ದು, ಅರ್ಜಿದಾರ ಯುವತಿಯನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದ್ದರು.
ಈ ಕೋರಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಮೇಶ್ ಜಾರಕಿಹೊಳಿ ದಾಖಲಿಸಿರುವ ದೂರನ್ನು ರದ್ದುಪಡಿಸಲು ಕೋರಿ ಸಿಆರ್‌ಪಿಸಿ 482 ಅಡಿ ಸಲ್ಲಿಸಿದ ಅರ್ಜಿ ಇದಾಗಿದ್ದು, ಅರ್ಜಿದಾರಳನ್ನು ಬಂಧಿಸದಂತೆ ಈ ಅರ್ಜಿಯಲ್ಲಿ ಸೂಚಿಸಲಾಗುವುದಿಲ್ಲ. ಅಗತ್ಯವಿದ್ದರೆ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ ಎನ್ನಲಾಗಿದೆ.