Home ಟಾಪ್ ಸುದ್ದಿಗಳು ಪರಿಷತ್ ಉಪಚುನಾವಣೆ : ಚಂದ್ರ ಪ್ರಕಾಶ್ ಶೆಟ್ಟಿ ತುಂಬೆಗೆ ಕಾಂಗ್ರೆಸ್ ಟಿಕೆಟ್ ಸಾಧ್ಯತೆ

ಪರಿಷತ್ ಉಪಚುನಾವಣೆ : ಚಂದ್ರ ಪ್ರಕಾಶ್ ಶೆಟ್ಟಿ ತುಂಬೆಗೆ ಕಾಂಗ್ರೆಸ್ ಟಿಕೆಟ್ ಸಾಧ್ಯತೆ

ಮಂಗಳೂರು : ದಕ್ಷಿಣ ಕನ್ನಡ ಉಡುಪಿ‌ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಕುತೂಹಲ ಇದೆ.

ಕಾಂಗ್ರೆಸ್ ಪಕ್ಷದಲ್ಲಿ ಆರು ಮಂದಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ. ಅರ್ಜಿ ಸಲ್ಲಿಸಿರುವ ಆರು ಮಂದಿ ಆಕಾಂಕ್ಷಿಗಳ ಪೈಕಿ ಉಡುಪಿ ಜಿಲ್ಲೆಯ ಐವರು ಆಕಾಂಕ್ಷಿಗಳಿದ್ದು ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರು ಟಿಕೆಟ್ ಆಕಾಂಕ್ಷಿ ಇದ್ದಾರೆ. ಉಡುಪಿ ಜಿಲ್ಲೆಯಿಂದ ರಾಜು ಪೂಜಾರಿ, ಭುಜಂಗ ಶೆಟ್ಟಿ, ಹರಿಪ್ರಸಾದ್, ಬಿ.ರಾಜು ಕಾರ್ಕಳ ಮತ್ತು ಉದಯ ಕುಮಾರ್ ಶೆಟ್ಟಿ ಮುನಿಯಾಲು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಚಂದ್ರ ಪ್ರಕಾಶ್ ಶೆಟ್ಟಿ ಕೂಡ ಆಕಾಂಕ್ಷಿಯಾಗಿದ್ದು ಟಿಕೆಟ್‌ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಸದ್ಯರಾಗಿರುವ ಚಂದ್ರ ಪ್ರಕಾಶ್ ಶೆಟ್ಟಿ ಮಾಜಿ ರಮಾನಾಥ ರೈ ಮತ್ತು ಸ್ಪೀಕರ್ ಯು.ಟಿ ಖಾದರ್ ಅವರ ಆಪ್ತರಾಗಿದ್ದು ಅವರಿಗೆ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ.

ಟಿಕೆಟ್ ಹಂಚಿಕೆಯಲ್ಲಿ ಬಾರಿ ಉಡುಪಿ ಜಿಲ್ಲೆಯವರಿಗೆ ಪ್ರಾಶಸ್ತ್ಯ ನೀಡುವುದಾಗಿ ಕೆಲ ದಿನಗಳ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ತಿಳಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ದಕ್ಷಿಣ ಕನ್ನಡ ಜಿಲ್ಲೆಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಅವರಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಚಂದ್ರ ಪ್ರಕಾಶ್ ಶೆಟ್ಟಿ ಅವರನ್ನು ರಮಾನಾಥ ರೈ ಮತ್ತು ಯು.ಟಿ ಖಾದರ್ ಅವರ ಬೆಂಬಲಿಸಿದ್ದು, ಪಕ್ಷ ಸೇವೆ, ಸೈದ್ಧಾಂತಿಕ ಬದ್ಧತೆ ಮತ್ತು ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ ಚಂದ್ರ ಪ್ರಕಾಶ್ ಶೆಟ್ಟಿ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರ ಬಳಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಮಾನಾಥ ರೈ ಮತ್ತು ಯು.ಟಿ ಖಾದರ್ ಬೆಂಬಲ ಇರುವುದರಿಂದ ಚಂದ್ರ ಪ್ರಕಾಶ್ ಶೆಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತ ಎಂದು ಅವರ ಆಪ್ತರು ಪ್ರಸ್ತುತ ನ್ಯೂಸ್‌ಗೆ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಸ್ಪರ್ಧೆ ಮಾಡುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚಂದ್ರ ಪ್ರಕಾಶ್ ಶೆಟ್ಟಿ ಅವರು ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿರುವ ರಾಜಕಾರಣಿ. ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ಸಾರೆ. ರಮಾನಾಥ ರೈ ಆಪ್ತರಾಗಿರುವ ಅವರು ಪಕ್ಷದ ಸಂಘಟನಾ ಉಸ್ತುವಾರಿಯಾಗಿ, ಪ್ರಚಾರ ಉಸ್ತುವಾರಿಯಾಗಿ, ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತುಂಬೆ ಗ್ರಾಮ ಪಂಚಾಯತ್ ಸದಸ್ಯರಾಗಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮುಡಿಪು ಮತ್ತು ಪಾಣೆಮಂಗಳೂರು ಬ್ಲಾಕ್ ಸಮಿತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಸದಸ್ಯರಾಗಿದ್ದಾರೆ. ಸಹಕಾರ ಕ್ಷೇತ್ರ, ಧಾರ್ಮಿಕ ಮತ್ತು ಸಾರ್ವಜನಿಕ ಸಂಘಸಂಸ್ಥೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ದಕ್ಷಿಣ ಕನ್ನಡ ಉಡುಪಿ‌ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 21ರಂದು ಉಪಚುನಾವಣೆಯ ಮತದಾನ ನಡೆಯಲಿದೆ.

Join Whatsapp
Exit mobile version