ಮೈಸೂರು: ‘ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ಸುಜೀವ್ ಸಂಸ್ಥೆಯು ಇಲ್ಲಿನ ಮೀನಾ ಬಜಾರ್‌ನ ಆಝಂ ಮಸೀದಿ ಮುಂಭಾಗ ರಾಮನವಮಿ ಆಚರಿಸಲಿದೆ’ ಎಂದು ಸಮಿತಿಯ ಅಧ್ಯಕ್ಷ ವಿಕಾಸ್ ಶಾಸ್ತ್ರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡೂ ಧರ್ಮದವರ ಮಧ್ಯೆ ಸದ್ಯದ ಪರಿಸ್ಥಿತಿಯಲ್ಲಿ ಉಂಟಾಗಿರುವ ಬಿರುಕನ್ನು ಮುಚ್ಚಲು ಹಾಗೂ ದೇಶದ ಹಿತಕ್ಕಾಗಿ ಎಲ್ಲರೂ ಒಗ್ಗೂಡಿ ಮುಂದೆ ನಡೆಯಲು ಭಾವೈಕ್ಯದ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾನತೆಯ ಸಂದೇಶ ಸಾರಲು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮ ದವರು ಒಟ್ಟಾಗಿ ರಾಮನವಮಿ ಆಚರಿಸಲಿದ್ದಾರೆ. ರಾಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಜ್ಜಿಗೆ, ಪಾನಕ ಹಾಗೂ ಮುಸ್ಲಿಮರ ಇಫ್ತಾರ್ ಕೂಟ ಕ್ಕಾಗಿ ಹಣ್ಣು, ಸಮೋಸ, ಡ್ರೈಫ್ರೂಟ್ಸ್ಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.
‘ಕೋಟೆ ಆಂಜನೇಯಸ್ವಾಮಿ ದೇಗುಲದ ಸಮೀಪವಿರುವ ರಾಮ ಮಂದಿರ ಶಿಥಿಲಾವಸ್ಥೆ ತಲುಪಿದ್ದು, ಇಲ್ಲಿನ ರಾಮನ ಮೂಲ ವಿಗ್ರಹವನ್ನು ಚೀಲದಲ್ಲಿ ಮುಚ್ಚಿಡಲಾಗಿದೆ. ಉತ್ಸವ ಮೂರ್ತಿಗಷ್ಟೇ ಪೂಜೆ ಮಾಡಲಾಗುತ್ತಿದ್ದು, ಈ ದೇಗುಲದ ದುರಸ್ತಿಗೆ ಮುಸ್ಲಿಮರೂ ಕೈಜೋಡಿಸುತ್ತೇವೆ ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.