January 22, 2021
ರಾಮ ಮಂದಿರ ದೇಣಿಗೆ ಸಂಗ್ರಹ ಹಗರಣ | ಜನರಿಗೆ ವಂಚಿಸಿದ ಐವರ ಬಂಧನ

ಪಿಲಿಬಿತ್ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದ ನಕಲಿ ಸಂಘಟನೆಯೊಂದಕ್ಕೆ ಸೇರಿದ ಐವರನ್ನು ಬಂಧಿಸಲಾಗಿದೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರ ದೂರಿನ ಹಿನ್ನೆಲೆಯಲ್ಲಿ ಬಂಧನ ನಡೆದಿದೆ. ಬಂಧಿತರು ಕ್ರಿಮಿನಲ್ ಹಿನ್ನೆಲೆಯುಳ್ಳವರು ಎನ್ನಲಾಗಿದೆ.
ರಾಮ ಮಂದಿರ ನಿರ್ಮಾಣಕ್ಕಾಗಿ ವಿಎಚ್ ಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ರಾಷ್ಟ್ರಮಟ್ಟದಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಈ ನಡುವೆ, ಜಿಲ್ಲೆಯ ಸುನ್ ಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲಾ ಮಂದಿರ ಪ್ರದೇಶದಲ್ಲಿ ಒಂದು ತಂಡ ಇದೇ ರೀತಿ ದೇಣಿಗೆ ಸಂಗ್ರಹಿಸಲು ಮುಂದಾಗಿತ್ತು.
ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಅವರಿಗೆ ಅಧಿಕಾರವಿಲ್ಲದಿದ್ದರೂ, ನಕಲಿ ರಶೀದಿಗಳನ್ನು ನೀಡಿ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.