Home ರಾಜ್ಯ ಮೋದಿಯ ಆಡಳಿತದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತುವುದೇ ಅಪರಾಧ: ಎಂ.ಕೆ ಫೈಝಿ

ಮೋದಿಯ ಆಡಳಿತದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತುವುದೇ ಅಪರಾಧ: ಎಂ.ಕೆ ಫೈಝಿ

►ಮೈಸೂರು ಎಸ್ ಡಿಪಿಐ ಜನಾಧಿಕಾರ ಸಮಾವೇಶದಲ್ಲಿ ಹೇಳಿಕೆ

ಮೈಸೂರು: ಮೋದಿ ಆಡಳಿತದಲ್ಲಿ ದೇಶದ ಶೋಷಿತ ಸಮುದಾಯಗಳಾದ ದಲಿತರು, ಮುಸ್ಲಿಮರು, ಕ್ರೈಸ್ತರ ಪರವಾಗಿ ಧ್ವನಿ ಎತ್ತುವುದು, ಅವರ ಪರವಾಗಿ ಕೆಲಸ ಮಾಡುವುದು ಅಪರಾಧವಾಗಿಬಿಟ್ಟಿದೆ. ಅಂತಹವರನ್ನು ಹಿಡಿದು ಜೈಲಿಗೆ ಹಾಕಲಾಗುತ್ತಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ. ಕೆ ಫೈಝಿ ಹೇಳಿದ್ದಾರೆ.

 ಮೈಸೂರಿನಲ್ಲಿ ಇಂದು ಎಸ್ ಡಿಪಿಐ ಏರ್ಪಡಿಸಿದ್ದ ಬೃಹತ್ ಜನಾಧಿಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್ ಡಿಪಿಐ ಕೇವಲ ಅಲ್ಪಸಂಖ್ಯಾತರ ಪರವಾದ ಪಕ್ಷವಲ್ಲ. ಇದು ಈ ದೇಶದ ಬಹುಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿದೆ. ಈ ದೇಶದ ಮೂಲ ನಿವಾಸಿಗಳಾದ ದಲಿತ, ಮುಸ್ಲಿಂ, ಕ್ರೈಸ್ತ, ಹಿಂದುಳಿದ ವರ್ಗಗಳು ಈ ದೇಶದ ಬಹುಸಂಖ್ಯಾತರಾಗಿದ್ದು ಸಂಘಪರಿವಾರವೇ ಇಲ್ಲಿನ ಅಲ್ಪಸಂಖ್ಯಾತರ ಗುಂಪಾಗಿದೆ ಎಂದರು.

ಸಮಾವೇಶದ ಅಧ್ಯಕ್ಷೀಯ ಭಾಷಣ ಮಾಡಿದ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, ಈ ಸರ್ಕಾರದ ಆಡಳಿತದಲ್ಲಿ ದೇಶದ ಪ್ರಜೆಗಳ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಸರ್ಕಾರದ ಆಸ್ತಿಗಳನ್ನು ಅದಾನಿ ಅಂಬಾನಿಗಳಿಗೆ ಮಾರಿದ ಸರ್ಕಾರ ಕೊನೆಗೆ ಮೈಸೂರಿನ ಲಲಿತ್ ಮಹಲ್ ಅನ್ನೂ ಬಿಡದೇ ಖಾಸಗಿಯವರಿಗೆ ಮಾರಿದೆ ಎಂದರು. ಎಸ್ ಡಿಪಿಐ ಈ ದೇಶದ ಸೋಶಿತ ಸಮುದಾಯಗಳ ವಿಮೋಚನೆಗಿರುವ ದಾರಿಯಾಗಿದ್ದು  ಎಂತಹ ಕಠಿಣ ಸಂದರ್ಭಗಳಲ್ಲೂ ಪಕ್ಷ ಈ ಸೋಶಿತ ಸಮುದಾಯಗಳ ಜೊತೆ ನಿಲ್ಲಲಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್ ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಂ ಕಾಂಬ್ಳೆ, ಅಖ್ಲಾಕ್ ಮನೆಯಲ್ಲಿ ಬೇಯುವ ಮಾಂಸದ ಆಡುಗೆಯ ವಾಸನೆ ಪತ್ತೆ ಹಚ್ಚಲು ಸಾಧ್ಯವಾಗುವ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಆರೋಪಿ ನುಪುರ್ ಶರ್ಮಾಳ ಅಡಗುತಾಣ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಸರ್ಕಾರದ ಕುಮ್ಮಕ್ಕಿನಂತೆ ಈ ದೇಶದ ದಲಿತ, ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಕಾರ್ಯಾಚರಿಸುತ್ತಿದ್ದು ಈ ಕಾರಣಕ್ಕಾಗಿ ಈ ಸಮುದಾಯದ ಜನ ಹೆಚ್ಚಿನ ಪ್ರಮಾಣದಲ್ಲಿ ಜೈಲಿನಲ್ಲಿ ಕಾಣಸಿಗುತ್ತಾರೆ ಎಂದರು.

ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್ ಭಾಸ್ಕರ್ ಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮೈಸೂರಿನಲ್ಲಿ ಫಾರೂಖಿಯಾ ಶಾಲೆ ಮುಚ್ಚಿದಾಗ, ಚಿಕ್ಕಮಗಳೂರಿನಲ್ಲಿ ಬಡವರ ಮನೆಗಳ ಬುಲ್ಡೋಜರ್ ಹಾಯಿಸಿದಾಗ ಮಾತನಾಡದ ಸಿದ್ದರಾಮಯ್ಯ ಅದ್ದೂರಿ ಹುಟ್ಟು ಹಬ್ಬದ ಆಚರಣೆಯ ಸಿದ್ಧತೆಯಲ್ಲಿದ್ದಾರೆ. ಈ ಕಾರಣಕ್ಕಾಗಿ ನಾವು ಅವರಿಗೆ ಹ್ಯಾಪಿ ಬರ್ತ್ ಡೇ ಹೇಳಬೇಕೇ ಎಂದು ವ್ಯಂಗ್ಯವಾಡಿದರು.

ಸಭೆಯನ್ನುದ್ದೇಶಿಸಿ ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೊನ್ಸ್ ಫ್ರ್ಯಾಂಕೋ, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ಪ್ರೊಫೆಸರ್ ಸಯಿದಾ ಸಾದಿಯಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಹನ್ನಾನ್, ಮೌಲಾನಾ ನೂರುದ್ದಿನ್ ಫಾರೂಕಿ, ಮೈಸೂರು ಜಿಲ್ಲಾಧ್ಯಕ್ಷ ರಫತುಲ್ಲಾ ಖಾನ್ ಮಾತನಾಡಿದರು.

ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ಮುಖಂಡರಾದ ಅಕ್ರಮ್ ಹಸನ್, ಹಮೀದ್ ಉಲ್ ಹಸನ್ ಕುರೇಶಿ, ಖಾಝಿ ಉಸ್ಮಾನ್ ಶರೀಫ್, ಮುಫ್ತಿ ತಾಜುದ್ದೀನ್ ಮೈಸೂರು, ದಲಿತ ಮುಖಂಡ ಚೋಮಲ್ಲಿ ಶಿವಣ್ಣ, ಲಕ್ಷ್ಮಣ್ ಚೀರಣಹಳ್ಳಿ, ಮಾಜಿ ಕಾರ್ಪೋರೇಟರ್ ಸ್ವಾಮಿ, ಅಬೂಬಕ್ಕರ್ ಕುಳಾಯಿ, ಮಜಾಜ್ ಹುಣಸೂರು, ಸಿದ್ದಿಕ್ ಆನೆಮಹಲ್, ಖಲೀಲ್ ಮಡಿಕೇರಿ, ಸಾದಾತ್ ಮಂಡ್ಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಸಮಿತಿಯ ಸದಸ್ಯರಾದ ಅಮ್ಜದ್ ಖಾನ್ ಸ್ವಾಗತಿಸಿದರೆ ಮೈಸೂರು ಜಿಲ್ಲಾ ಕಾರ್ಯದರ್ಶಿ ಶಫಿವುಲ್ಲಾ ವಂದಿಸಿದರು. ಝಾಹಿದ್ ಮಲಾರ್ ಮತ್ತು ಫರ್ದೀನ್ ಮೈಸೂರು ಕಾರ್ಯಕ್ರಮ ನಿರೂಪಿಸಿದರು. ಸಮಾವೇಶವನ್ನು ನಾಡಗೀತೆಯೊಂದಿಗೆ ಆರಂಭಿಸಿ ರಾಷ್ಟ್ರಗೀತೆಯೊಂದಿಗೆ ಕೊನೆಗೊಳಿಸಲಾಯಿತು.

Join Whatsapp
Exit mobile version