ಜ.12ರ ವರೆಗೂ ಮಳೆ | ಇಂದು, ನಾಳೆ ಕರಾವಳಿ ಸೇರಿ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

Prasthutha|

ಬೆಂಗಳೂರು : ಕಳೆದ ಎರಡ್ಮೂರು ದಿನಗಳಿಂದ ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಸಂಜೆ ಹಾಗೂ ರಾತ್ರಿ ಭಾರೀ ಮಳೆ ಸುರಿದ ಬಗ್ಗೆ ವರದಿಗಳಾಗಿವೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಹಾಗೂ ಪೂರ್ವ ವಲಯದ ಮೋಡಗಳ ಚಲನೆ ಹೆಚ್ಚಾಗಿರುವುದು ಈ ಮಳೆಗೆ ಕಾರಣವೆಂದು ತಿಳಿದುಬಂದಿದೆ.

- Advertisement -

ಇದೀಗ ಇನ್ನೂ ಎರಡು ದಿನ ಮಳೆ ಸುರಿಯುವ ಸಾಧ್ಯತೆಯಿದ್ದು, ಹಲವೆಡೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜ.8 ಮತ್ತು ಜ.9ಕ್ಕೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ. ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಕಾಲಿಕ ಮಳೆಯಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗದ ರೈತರು ಆತಂಕಿತರಾಗಿದ್ದಾರೆ. ಈ ಮಳೆ ಗೇರು, ಮಾವಿನ ಗಿಡ ಹೂ ಬಿಡುವ ಕಾಲದಲ್ಲಿ ಬಂದಿರುವುದರಿಂದ, ಫಸಲಿನ ಮೇಲೆ ಇದು ನೇರ ಪರಿಣಾಮ ಬೀರಲಿದೆ ಎಂಬುದು ಕೃಷಿಕರ ಆತಂಕವಾಗಿದೆ.

- Advertisement -

ಕೆಲವು ಜಿಲ್ಲೆಗಳಲ್ಲಿ ಜ.12ರ ವರೆಗೆ ಮಳೆಯಾಗಲಿದೆ ಎನ್ನಲಾಗಿದೆ. ಅದರಲ್ಲಿ ಏಳು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.      

Join Whatsapp