ಹಾಸನ: ಜಿಲ್ಲೆಯ ಮಲೆನಾಡೀಗ ಅಕ್ಷರಶಃ ಬ್ಯೂಟಿ ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಮಳೆಗಾಲ ಬಂದ್ರೆ ಸಾಕು, ನಿತ್ಯ ಸುರಿವ ಮುಸಲಧಾರೆ, ಮಂಜಿನ ತೆರೆ, ಭೋರ್ಗರೆವ ಹಳ್ಳಕೊಳ್ಳ, ಮುಗಿಲ ಚುಂಬಿಸುವ ಗಿರಿ-ಶಿಖರದ ದೃಶ್ಯವೈಭವನನ್ನು ಕಣ್ತುಂಬಿಕೊಳ್ಳೋದೇ ಮಹದಾನಂದ. ಇದೆಲ್ಲವೂ ಈಗ ಹಾಸನದಿಂದ ಸಕಲೇಶಪುರ ಕಡೆಗೆ ಪಯಣ ಬೆಳೆಸಿದರೆ ಕಾಣಸಿಗಲಿದೆ.
ಮಲೆನಾಡಿನ ಮಧ್ಯೆ ಪಯಣಿಸಲು ಆರಂಭಿಸಿದರೆ ಹೊಸ ನವೋಲ್ಲಾಸ ಪ್ರತಿಯೊಬ್ಬರನ್ನೂ ಉಲ್ಲಸಿತಗೊಳಿಸದೇ ಇರದು. ಪ್ರತಿ ಮಳೆಗಾಲದಲ್ಲೂ ಮಲೆನಾಡಿನ ಪ್ರಕೃತಿಯ ಸೊಬಗು, ರುದ್ರರಮಣೀಯ ದೃಶ್ಯಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ.
ನಿತ್ಯ ಜಂಜಾಟದಿಂದ ಬಸವಳಿದ ಯಾರೇ ಆಗಲಿ ಈಗೊಮ್ಮೆ ಸಕಲೇಶಪುರಕ್ಕೆ ಭೇಟಿ ಕೊಟ್ರೆ ಸಾಕು, ಹಸಿರು ಚೆಲುವಿನ, ಮಳೆಯ ನರ್ತನ, ಹಿಮರಾಶಿಯ ಚುಮುಚುಮು ಚಳಿಯ ವೈಭವದ ತಣ್ಣನೆಯ ಲೋಕ ಒಂದು ಕ್ಷಣ ಮೈ ಮರೆಸುತ್ತದೆ. ಹಲವು ದಿನಕ್ಕೆ ಸಾಕಾಗುವಷ್ಟು ರಿಲ್ಯಾಕ್ಸ್ ಒಂದೇ ದಿನ ಸಿಗುತ್ತದೆ.
ಮೊದಲೇ ಹಸಿರ ಸೆರಗು ಹೊದ್ದು ಮಲಗಿರುವ ಮಲೆನಾಡಿನ ಮೈಸಿರಿ, ಮಳೆಯ ಸ್ಪರ್ಶವಾಗುತ್ತಿದ್ದಂತೆಯೇ ಬೇರೆಯದೇ ರೀತಿಯಲ್ಲಿ ಕಂಗೊಳಿಸಲಾರಂಭಿಸುತ್ತದೆ. ಮಳೆ ಮತ್ತು ಮಂಜಿನ ಹನಿ ಮಿಳಿತವಾಗಿ ಪ್ರವಾಸಿಗರು ಅನುಭವಿಸದೇ ಇರದ ಹಿತಾನುಭವ ಕಟ್ಟಿಕೊಡುತ್ತದೆ. ಮಳೆ, ಹಿಮದ ಹನಿಯ ಹೊತ್ತ ಹಸಿರು ಹುಲ್ಲುಗರಿಗೆ ಹೊಸ ರೂಪ ಬಂದು ಬಿಡುತ್ತದೆ. ಹೀಗೆ ಪ್ರಕೃತಿಯ ಮೂಲ ಸೌಂರ‍್ಯದ ಸಹಜತೆ ಜೊತೆಗೆ ನಿತ್ಯ ಸುರಿಯುವ ವರ್ಷಧಾರೆ, ಮೈ ಮನಕ್ಕೆ ಆನಂದ ನೀಡದೇ ಇರದು.
ಮೌನವಾಗಿ ನಿಂತು ಕೈಬೀಸಿ ಕರೆಯವ ಬೆಟ್ಟಗುಡ್ಡ ಭೂರಮೆಯ ಚಲುವಿನ ಲೋಕ ನಮ್ಮನ್ನು ಮೂಕ ವಿಸ್ಮಿತ ಗೊಳಿಸುತ್ತದೆ. ಮುಗಿಲತ್ತ ಮುಖ ಮಾಡಿರುವ ಗಿರಿಗಳ ಮುಡಿಗೆ ಮುಕುಟ ಇಟ್ಟಂತೆ ಭಾಸವಾಗುವ ಹಿಮರಾಶಿಯ ವೈಭವವಂತೂ ನೋಡುಗರನ್ನು ಕುಣಿದು ಕುಪ್ಪಳಿಸುವಂತೆ ಮಾಡದೇ ಇರದು. ಮಳೆಗಾಲದಲ್ಲಿ ಇಮ್ಮಡಿ ಗೊಳ್ಳುವ ಪ್ರಕೃತಿಯ ಚಲುವನ್ನು ಎಷ್ಟೇ ನೋಡಿದ್ರೂ ಕಣ್ಣಳತೆ ಸಾಕಾಗುವುದೇ ಇಲ್ಲ.
ಸಕಲೇಶಪುರ ಸಿರಿಯ ಮತ್ತೊಂದು ಆಕರ್ಷಣೆ ಎಂದ್ರೆ ಬಿಸಿಲೆ ರಕ್ಷಿತಾ ಅರಣ್ಯ. ಇದು ಭೂ ಲೋಕದ ಸ್ವರ್ಗ ಎಂದೇ ಹಿಂದಿನಿAದಲೂ ಖ್ಯಾತಿಯಾಗಿದೆ. ಪುಷ್ಪಗಿರಿ ಸೇರಿದಂತೆ ಪರ್ವತಗಳು ಇಲ್ಲಿದ್ದು, ಅಪರೂಪದ ಸಸ್ಯ ಸಂಕುಲದ ರಾಶಿ ಇಲ್ಲಿ ಆವಕವಾಗಿದೆ. ಆದ್ರೆ ದಟ್ಟ ಮಂಜು ಆವರಿಸಿಕೊಂಡಿರುವುದರಿಂದ ಬಿಸಿಲೆಯ ನಿಜವಾದ ಬ್ಯೂಟಿ ಮಂಜಿನ ಮಧ್ಯೆ ಮರೆಯಾಗಿದೆ. ಆದ್ರೂ ಎಂಜಾಯ್ ಮಾಡೋರಿಕೆ ಕೊಂಚವೂ ಮೋಸವಾಗದು. ಕುಣಿದು ಕಪ್ಪಳಿಸೋಕೆ ಹೇಳಿ ಮಾಡಿಸಿದ ಜಾಗ ಬಿಸಿಲೆ. ಹಸಿರು ಸಿರಿಗೆ ಮಂಜಿನ ಹೊದಿಕೆಯ ರಮಣೀಯತೆ ಒಂದೆಡೆಯಾದ್ರೆ ಜೋರು ಮಳೆಯಿಂದ ಮೈದುಂಬಿಕೊಂಡು ಧುಮ್ಮಿಕ್ಕುವ ಹಳ್ಳ-ಕೊಳ್ಳ, ಕಿರುತೊರೆಯ ಝುಳು ಝುಳು ನಿನಾದ ಕಂಡು, ಮರ್ಮರಿಸುವ ಸದ್ದು ಆಲಿಸುವುದೇ ಹಿತಾನುಭವ. ಮಂಜಿನ ಸೋನೆ ಮಳೆಗೆ ಕಣ್ಣು ಮಬ್ಬಾದರೂ, ಹಿತವಾದ ಚಳಿಯ ಅನುಭವಕ್ಕೆ ಮನಸ್ಸು ಮುದಗೊಳ್ಳುತ್ತದೆ.
ಒಟ್ಟಿನಲ್ಲಿ ರೈನೀ ಸೀಜನ್‌ನಲ್ಲಿ ಕಳೆಗಟ್ಟಿದ ಮೋಡಗಳ ಆಟ, ಮಂಜಿನ ಮರೆಯಲಿ ಮುಳುಗುವ ಗಿರಿಗಳ ಮೈಮಾಟ, ಝುಳ ಝುಳ ಹರಿಯುವ ನೀರ ನರ್ತನ, ನಿಮ್ಮನ್ನು ಸಮ್ಮೋಹನಗೊಳಿಸದೇ ಇರದು.
ಸದ್ಯ ಸಕಲೇಶಪುರ ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಶಿರಾಡಿಘಾಟ್‌ನ ರಾಷ್ಟ್ರೀಯ ಹೆದ್ದಾರಿ 75 ರ ಇಕ್ಕೆಲಗಳಲ್ಲಿ ಕಿರುತೊರೆಗಳು ಮೈದುಂಬಿ ಹರಿಯುತ್ತಿವೆ. ರಸ್ತೆಯ ಇಳಿಜಾರಿನತ್ತ ಧುಮ್ಮಿಕ್ಕುತ್ತಿರುವ ಹಾಲ್ನೊರೆಯಂತ ನೀರಿನ ಹರಿವನ್ನು ನೋಡುವುದೇ ಒಂದು ಮಹದಾನಂದ. ಈ ಮಾರ್ಗದಲ್ಲಿ ಸಂಚರಿಸಿರುವ ಪ್ರತಿಯೊಬ್ಬರೂ ಇಲ್ಲಿ ಕೆಲ ಕ್ಷಣ ನಿಂತು, ನೀರಿನಲ್ಲಿ ಆಟವಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಮುಂದೆ ಸಾಗುವುದು ಸಾಮಾನ್ಯವಾಗಿದೆ.