Home ಟಾಪ್ ಸುದ್ದಿಗಳು 4.5 ಅಡಿ ಸುತ್ತಳತೆಯಲ್ಲಿ ಮಾತ್ರ ಮಳೆ: ಕೊಡಗಿನಲ್ಲಿ ಹೀಗೊಂದು ಅಚ್ಚರಿ !

4.5 ಅಡಿ ಸುತ್ತಳತೆಯಲ್ಲಿ ಮಾತ್ರ ಮಳೆ: ಕೊಡಗಿನಲ್ಲಿ ಹೀಗೊಂದು ಅಚ್ಚರಿ !

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಬೆಟಗೇರಿ ಬಳಿ ಹೆರವ ನಾಡು ಗ್ರಾಮದಲ್ಲಿ ಸುಮಾರು ನಾಲ್ಕೂವರೆ ಅಡಿ ಸುತ್ತಳತೆಯೊಳಗೆ ಮಾತ್ರ ಮಳೆಯಾಗುತ್ತಿರುವ ವಿದ್ಯಮಾನವನ್ನು ಕಂಡು ಸ್ಥಳೀಯರ ಅಚ್ಚರಿಗೆ ಒಳಗಾಗಿದ್ದಾರೆ. ಈ ಮೂಲಕ ಕಳೆದ ಕೆಲ ವರ್ಷಗಳಿಂದ ಕಾಡುತ್ತಿರುವ ಪ್ರಾಕೃತಿಕ ವಿಕೋಪದ ಭಯದಿಂದ ಇನ್ನೂ ಹೊರ ಬಾರದ ಜನರಿಗೆ ಈ ವಿದ್ಯಾಮನ ಮತ್ತಷ್ಟು ಆತಂಕ ಉಂಟಾಗುವಂತೆ ಮಾಡಿದೆ.

ಕಾಂಕ್ರಿಟ್ ರಸ್ತೆಯ ಅದೊಂದಿಷ್ಟು ಭಾಗ ಮಾತ್ರ ಕಳೆದ 20 ದಿನಗಳಿಂದ ಒದ್ದೆಯಾಗಿ ಕಂಡು ಬರುತ್ತಿತ್ತು. ಈ ಬಗ್ಗೆ ತನಿಖೆ ಮಾಡಲು ಹೊರಟ ಸ್ಥಳೀಯರಿಗೆ ಆಶ್ಚರ್ಯ ಕಾದಿತ್ತು. ಒದ್ದೆಯಾಗಿರುವ ಜಾಗದಲ್ಲಿ ನಿಂತರೆ ಮಳೆ ಹನಿ ಮೈ ಮೇಲೆ ಬೀಳುವ ಅನುಭವ ಆಗುತ್ತಿತ್ತು. ಸುತ್ತಲೆಲ್ಲಾ ಬಿಸಿಲು, ಮೋಡದ ವಾತಾವರಣ ಇದ್ದರೂ ಸುಮಾರು 4.5 ಅಡಿ ಸುತ್ತಳತೆಯ ಈ ಜಾಗದಲ್ಲಿ ಮಳೆಯ ಹನಿ ನಿರಂತರ ಬೀಳುತ್ತಲೇ ಇದೆ

ಕೆಲವು ಜಾತಿಯ ಮರಗಳು ಇದ್ದಲ್ಲಿ ಈ ರೀತಿ ಆಗುತ್ತದೆ ಎನ್ನುವುದರ ಅರಿವು ಇಲ್ಲಿಯ ಬಹುತೇಕರಿಗೆ ಇದೆ. ಆದರೆ ಈ ವಿದ್ಯಮಾನ ನಡೆಯುತ್ತಿರುವ ಪ್ರದೇಶದಲ್ಲಿ ಅಂತಹ ಮರಗಳು ಇರುವ ಲಕ್ಷಣ ಇಲ್ಲದಿರುವುದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ. ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಕಾರಣ ಕಂಡು ಹಿಡಿಯುವಂತೆ ಮನವಿ ಮಾಡಿದ್ದಾರೆ.


‘ಕೆಲವು ಮರಗಳು ಈ ರೀತಿ ನೀರಿನ ಹನಿ ಬೀಳಿಸುತ್ತವೆ. ಅವುಗಳ ಬೇರಿಗೆ ಪೆಟ್ಟಾದಾಗ, ಹುಳುಗಳು ತಿಂದಾಗ ಹೀಗೆ ನೀರು ಬೀಳುವ ಸಾಧ್ಯತೆ ಇದೆ. ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ ನಂತರ ಕಾರಣವನ್ನು ಖಚಿತವಾಗಿ ಹೇಳಬಹುದು’ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜು ಸಹ ಪ್ರಾಧ್ಯಾಪಕ ಡಾ. ಎಂ. ಜಡೇಗೌಡ ಹೇಳುತ್ತಾರೆ.

‘ಮೋಡಗಳು ಚಲಿಸುವುದರಿಂದ ಒಂದೇ ಜಾಗದಲ್ಲಿ ಹೀಗೆ ಮಳೆ ಹನಿ ಬೀಳಲು ಸಾಧ್ಯವಿಲ್ಲ. ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದರೆ ಮೂಲ ಕಂಡು ಹಿಡಿಯಬಹುದು. ನನಗೂ ಇದು ಮರದಿಂದಲೇ ಬೀಳುತ್ತಿದೆ ಎನ್ನಿಸುತ್ತದೆ’ ಎಂದು ಬೆಂಗಳೂರಿನ ಹಿರಿಯ ಭೂ ವಿಜ್ಞಾನಿ ಡಾ. ಎಚ್. ಎಸ್. ಎಂ. ಪ್ರಕಾಶ್ ತಿಳಿಸಿದ್ದಾರೆ.

Join Whatsapp
Exit mobile version