Home Uncategorized ರಾಜ್ಯದ ವಿವಿಧೆಡೆ ಮಳೆ | ಕೊಡಗಿನಲ್ಲಿ ಭಾರೀ ಆಲಿಕಲ್ಲು ಮಳೆ; ಬೆಳೆಗಳಿಗೆ ನಷ್ಟ

ರಾಜ್ಯದ ವಿವಿಧೆಡೆ ಮಳೆ | ಕೊಡಗಿನಲ್ಲಿ ಭಾರೀ ಆಲಿಕಲ್ಲು ಮಳೆ; ಬೆಳೆಗಳಿಗೆ ನಷ್ಟ

ಬೆಂಗಳೂರು : ರಾಜ್ಯದ ವಿವಿಧೆಡೆಗಳಲ್ಲಿ ಶುಕ್ರವಾರವೂ ಮಳೆಯಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಈ ನಡುವೆ ಕೊಡಗಿನಲ್ಲಿ ಭಾರೀ ಪ್ರಮಾಣದ ಆಲಿಕಲ್ಲು ಮಳೆಯಾಗಿದೆ. ಕೊಡಗಿನಲ್ಲಾಗಿರುವ ಆಲಿಕಲ್ಲು ಮಳೆಯ ದೃಶ್ಯಾವಳಿಗಳು, ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕರ್ನಾಟಕದ ಕಾಶ್ಮೀರ ಕೊಡಗು ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂಬ ಒಕ್ಕಣೆಯ ಸಂದೇಶಗಳು ಹರಿದಾಡಿವೆ.

ಆಲಿಕಲ್ಲು ಹೊಡೆತಕ್ಕೆ ಕಾಫಿ, ಬಾಳೆ, ಕಾಳು ಮೆಣಸಿನ ಬಳ್ಳಿ, ಹಸಿರು ಮೆಣಸಿನ ಕಾಯಿಗೆ ಭಾರೀ ಹಾನಿಯಾಗಿ, ನಷ್ಟವುಂಟಾಗಿದೆ. ಇನ್ನೊಂದೆಡೆ ರಾಜ್ಯದ ವಿವಿಧೆಡೆಗಳಲ್ಲಿ ಅನಿರೀಕ್ಷಿತ ಮಳೆಯಾಗಿರುವುದರಿಂದ, ಬಿಸಿಲಿಗೆ ಒಣ ಹಾಕಲಾಗಿದ್ದ ಅಡಿಕೆ, ಕರಿಮೆಣಸಿನಂತಹ ಬೆಳೆಗಳು ಒದ್ದೆಯಾಗಿಯೂ ನಷ್ಟವುಂಟಾಗಿದೆ.

ಮಾವಿನ ಹೂವು ಉದುರಿದ್ದು, ಎಲೆಕೋಸು, ಸೋರೆಕಾಯಿ, ಸೌತೆ ಮುಂತಾದ ತರಕಾರಿ ಬೆಳೆಗಳ ಮೇಲೂ ಈ ಮಳೆ ಪರಿಣಾಮ ಬೀರಲಿದೆ ಎನ್ನಲಾಗಿದೆ.

ಯಾದಗಿರಿ, ಕರಾವಳಿ, ಮಲೆನಾಡು, ಬೆಂಗಳೂರು ನಗರದಲ್ಲೂ ಮಳೆಯಾಗಿದೆ. ಫೆ.18ರ ವರೆಗೂ ಅರಬ್ಬಿ ಸಮುದ್ರದಲ್ಲಿ ಕರ್ನಾಟಕದಿಂದ ಗುಜರಾತಿನ ವರೆಗೂ ವಾಯು ಭಾರದ ಒತ್ತಡ ಕಡಿಮೆಯಿತ್ತು. ಈಗ ದಿಢೀರನೇ ಆಗಿರುವ ಬದಲಾವಣೆಯಿಂದ ಫೆ.21ರ ವರೆಗೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ.  

Join Whatsapp
Exit mobile version