Home ಟಾಪ್ ಸುದ್ದಿಗಳು ರೈಲ್ವೇ ಹಳಿಗೆ ಬಿದ್ದ ಮಗುವಿನ ಜೀವ ಉಳಿಸಿದ ರೈಲ್ವೇ ಸಿಬ್ಬಂದಿಗೆ ಆನಂದ್ ಮಹೀಂದ್ರಾರಿಂದ ಬೈಕ್ ಬಹುಮಾನ

ರೈಲ್ವೇ ಹಳಿಗೆ ಬಿದ್ದ ಮಗುವಿನ ಜೀವ ಉಳಿಸಿದ ರೈಲ್ವೇ ಸಿಬ್ಬಂದಿಗೆ ಆನಂದ್ ಮಹೀಂದ್ರಾರಿಂದ ಬೈಕ್ ಬಹುಮಾನ

►50,000 ಬಹುಮಾನ ಘೋಷಿಸಿದ ರೈಲ್ವೇ ಇಲಾಖೆ, ಪ್ರಶಂಸೆಗಳ ಸುರಿಮಳೆ

ಮುಂಬೈ: ಇತ್ತೀಚೆಗೆ ಮುಂಬೈನ ರೈಲು ನಿಲ್ದಾಣವೊಂದರಲ್ಲಿ ರೈಲ್ವೇ ಪಾಯಿಂಟ್‌ಮ್ಯಾನ್ ಮಯೂರ್ ಶೆಲ್ಕೆ ತನ್ನ ಜೀವವನ್ನು ಪಣಕ್ಕಿಟ್ಟು ಆರು ವರ್ಷದ ಬಾಲಕನನ್ನು ರಕ್ಷಣೆ ಮಾಡಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದಾದ ಬಳಿಕ ಎಲ್ಲಾ ಕಡೆಗೆ ಮೆಚ್ಚುಗೆಗಳ ಮಹಾಪೂರವನ್ನೇ ಗಳಿಸಿದ್ದ ಮಯೂರ್‌ಗೆ ಅಧಿಕಾರಿಗಳೂ ಭವ್ಯ ಸ್ವಾಗತ ನೀಡಿದ್ದಾರೆ. ಈ ದೃಶ್ಯವೂ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆನಂದ್ ಮಹಿಂದ್ರಾ ಒಡೆತನದ ಜಾವಾ ಕಂಪೆನಿ ತನ್ನ ಕ್ಲಾಸಿಕ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ್ದು, ರೈಲ್ವೆ ಸಚಿವಾಲಯವು 50,000 ರೂಪಾಯಿ ಬಹುಮಾನವನ್ನು ಘೋಷಿಸಿದೆ.

ಮುಂಬೈನ ವಂಗಾನಿ ರೈಲು ನಿಲ್ದಾಣದಲ್ಲಿ ಅಂಧ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗನೊಂದಿಗೆ ರೈಲು ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕ ಆಯತಪ್ಪಿ ಹಳಿ ಮೇಲೆ ಬಿದ್ದಿದ್ದ. ಅಷ್ಟರಲ್ಲಿ ರೈಲು ಕೂಡಾ ನಿಲ್ದಾಣ ಪ್ರವೇಶಿಸಿ ಆಗಿತ್ತು. ದೃಷ್ಟಿದೋಷ ಇದ್ದ ತಾಯಿಗೆ ಏನು ಮಾಡುವುದೆಂದೇ ಗೊತ್ತಾಗದೆ ಅಸಹಾಯಕರಾಗಿ ರೋದಿಸುತ್ತಿದ್ದರು. ಈ ವೇಳೆ, ಅರೆಕ್ಷಣವೂ ವ್ಯರ್ಥ ಮಾಡದೆ ರೈಲಿಗೆ ವಿರುದ್ಧವಾಗಿ ಹಳಿ ಮೇಲೆಯೇ ಓಡಿ ಬಂದಿದ್ದ ಮಯೂರ್ ಮಗುವನ್ನು ರಕ್ಷಿಸಿ ಕೂದಲೆಳೆ ಅಂತರದಲ್ಲಿ ಮಯೂರ್ ರೈಲಿನಿಂದ ಪಾರಾಗಿದ್ದರು. ಮಯೂರ್ ಶೆಲ್ಕೆ ಮಗುವನ್ನು ರಕ್ಷಿಸಿ ಫ್ಲಾಟ್‌ಫಾರ್ಮ್‌ ಮೇಲೆ ಹತ್ತುವುದಕ್ಕೂ ರೈಲು ಅಲ್ಲೇ ಸಾಗುವ ಸಮಯಕ್ಕೂ ತುಂಬಾ ಅಂತರವೇನು ಇರಲಿಲ್ಲ.

ಈ ದೃಶ್ಯ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಜೊತೆಗೆ, 30 ಸೆಕೆಂಡಿನ ಈ ಭಾವನಾತ್ಮಕ ದೃಶ್ಯ ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಮಯೂರ್ ಅವರ ನಿಸ್ವಾರ್ಥ ಸೇವೆ ಮತ್ತು ಸಮಯಪ್ರಜ್ಞೆ, ಸಾಹಸವನ್ನು ಕೊಂಡಾಡಿದ್ದಾರೆ.

Join Whatsapp
Exit mobile version