ಲಖಿಂಪುರ್ ಖೇರಿ ಹತ್ಯಾಕಾಂಡ | ನಾಳೆ ದೇಶದಾದ್ಯಂತ ರೈತರಿಂದ ರೈಲ್ ರೋಕೋ ಚಳವಳಿಗೆ ಕರೆ

Prasthutha|

ಲಖಿಂಪುರ್‌ ಖೇರಿ ಹತ್ಯಾಕಾಂಡವನ್ನು ಖಂಡಿಸಿ, ಕೇಂದ್ರ ಸರಕಾರದ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ (ಅ.18)ಕ್ಕೆ ದೇಶಾದ್ಯಂತ ರೈಲ್ ರೋಕೋ ಚಳವಳಿಗೆ ಕರೆ ನೀಡಿದೆ.

- Advertisement -

ಸಚಿವ ಅಜಯ್ ಮಿಶ್ರಾ ತೇನಿಯನ್ನು ಸಚಿವ ಸ್ಥಾನದಿಂದ ತೆಗೆದುಹಾಕಿ, ತಕ್ಷಣ ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ. ಇದೇ ಬೇಡಿಕೆಗಾಗಿ ನಾಳೆ 6 ಗಂಟೆಗಳ ಕಾಲ, ಅಂದರೆ, ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಭಾರತದಾದ್ಯಂತ ರೈಲು ಸಂಚಾರಕ್ಕೆ ತಡೆ ಒಡ್ಡಿ ರೈಲ್ ರೋಕೋ ಚಳವಳಿ ನಡೆಸಲಿದೆ. ರೈಲ್ ರೋಕೋ ಶಾಂತಿಯುತವಾಗಿರುವಂತೆ ಮತ್ತು ರೈಲ್ವೆ ಆಸ್ತಿಗೆ ಯಾವುದೇ ರೀತಿಯ ಹಾನಿಯಾಗದಂತೆ ಚಳವಳಿ ಮಾಡಬೇಕು ಎಂದು ಎಸ್‌ಕೆಎಂ ಮನವಿ ಮಾಡಿದೆ. ಉತ್ತರ ಪ್ರದೇಶದ ಲಖಿಂಪುರ್‌ ಖೇರಿ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆಗಳು ತೀವ್ರಗೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದೆ.

ಸಚಿವ ಅಜಯ್ ಮಿಶ್ರಾ ತೇನಿ ರೌಡಿ ಶೀಟರ್‌ನಂತೆ ಸಾರ್ವಜನಿಕ ಸಭೆಯಲ್ಲಿ ರೈತರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ಭಾಷಣಗಳಲ್ಲಿ ಹಿಂದೂಗಳು ಮತ್ತು ಸಿಖ್ಖರ ನಡುವೆ ದ್ವೇಷ ಬಿತ್ತಲು ಯತ್ನಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಹತ್ಯೆ ಮಾಡಲು ಅವರ ಕಾರುಗಳನ್ನು ಬಳಸಲಾಗಿದೆ. ಆರೋಪಿಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಇವರನ್ನು ಮೊದಲೇ ಬಂಧಿಸಬೇಕಿತ್ತು” ಎಂದು ಹೇಳಿದೆ. ಅಜಯ್ ಮಿಶ್ರಾ ತೇನಿಯವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುತ್ತಿರುವುದು ಸಂಪುಟಕ್ಕೆ ಅವಮಾನ. ಅವರನ್ನು ಸ್ಥಾನದಿಂದ ವಜಾಗೊಳಿಸಿ, ತಕ್ಷಣ ಬಂಧಿಸಬೇಕು ಎಂದು ಎಸ್‌ಕೆಎಂ ತೀವ್ರವಾಗಿ ಒತ್ತಾಯಿಸಿದೆ.

Join Whatsapp