Home ಕರಾವಳಿ ಜಿಲ್ಲಾ ನಾಯಕರನ್ನು ಅಕ್ರಮವಾಗಿ ಕೂಡಿಟ್ಟು ಹಲ್ಲೆ ನಡೆಸಿದ ರಾಯಚೂರು PSI ಯನ್ನು ಕೂಡಲೇ ಅಮಾನತುಗೊಳಿಸಿ: SDPI

ಜಿಲ್ಲಾ ನಾಯಕರನ್ನು ಅಕ್ರಮವಾಗಿ ಕೂಡಿಟ್ಟು ಹಲ್ಲೆ ನಡೆಸಿದ ರಾಯಚೂರು PSI ಯನ್ನು ಕೂಡಲೇ ಅಮಾನತುಗೊಳಿಸಿ: SDPI

ಮಂಗಳೂರು: SDPI ಜಿಲ್ಲಾಧ್ಯಕ್ಷ ಮತ್ತು ಕಾರ್ಯದರ್ಶಿಯವರ ಮೇಲೆ ಹಲ್ಲೆ ನಡೆಸಿ ಅಕ್ರಮವಾಗಿ ಠಾಣೆಯಲ್ಲಿ ಕೂಡಿ ಹಾಕಿದ ರಾಯಚೂರು ವೆಸ್ಟ್ ಠಾಣಾ ಪೊಲೀಸ್ ಅಧಿಕಾರಿಯ ಕ್ರಮಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗದ ವಿಚಾರದಲ್ಲಿ ನಡೆಯುತ್ತಿದ್ದ ಮಾತುಕತೆಯನ್ನು ಚಿತ್ರೀಕರಿಸಿದ ಕ್ಷುಲ್ಲಕ ಕಾರಣಕ್ಕಾಗಿ ಠಾಣೆಯ ಪಿಎಸ್ಸೈ ಮಂಜುನಾಥ್, ಯುವಕನೋರ್ವನ ಮೊಬೈಲನ್ನು ನವೆಂಬರ್ 9, 2021 ರಂದು ವಶಪಡಿಸಿಕೊಂಡಿದ್ದರು. ಅದನ್ನು ಕೇಳಲು ಹೋದ ಸಂದರ್ಭದಲ್ಲಿ ಮಂಜುನಾಥ್ ಪಿಎಸ್ಸೈ ಎರಡು ಲಕ್ಷ ಹಣದ ಬೇಡಿಕೆ ಇಟ್ಟಿದ್ದು, ಕೊಡದಿದ್ದರೆ ಸುಳ್ಳು ಕೇಸು ಹಾಕಿ ಹೇಗೆ ವಸೂಲಿ ಮಾಡಬೇಕೆಂದು ಗೊತ್ತಿದೆ ಎಂದು ಯುವಕನನ್ನು ಹೆದರಿಸಿ ಕಳುಹಿಸಲಾಗಿತ್ತು .ಪಿಎಸ್ಸೈ ಮಂಜುನಾಥ್ ಬೇಡಿಕೆಯನ್ನು ಕೇಳಿದ ಯುವಕ ಬೇರೆ ದಾರಿ ಕಾಣದೆ, ಮೊಬೈಲ್ ಮರಳಿಸಿಕೊಡುವಂತೆ ಎಸ್.ಡಿ.ಪಿ.ಐ ನಾಯಕರನ್ನು ಸಂಪರ್ಕಿಸಿದ್ದ. ಈ ಬಗ್ಗೆ ವಿಚಾರಿಸಲು ಠಾಣೆಗೆ ತೆರಳಿದ ಮೂವರು ಎಸ್.ಡಿ.ಪಿ.ಐ ನಾಯಕರನ್ನು ಪಿಎಸ್ಸೈ ಮಂಜುನಾಥ್ ಅವಾಚ್ಯವಾಗಿ ನಿಂದಿಸಿದ್ದು ಮಾತ್ರವಲ್ಲದೇ, ಥಳಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಕೊಲೆ ಆರೋಪಿಗಳನ್ನು ಬಂಧಿಸಿಡಲಾಗಿದ್ದ ಸೆಲ್ ನಲ್ಲಿಯೇ ಇಡೀ ರಾತ್ರಿ ಇವರನ್ನು ಕೂಡಿ ಹಾಕಿರುವುದು ಪೊಲೀಸ್ ಅಧಿಕಾರಿಯ ರಾಕ್ಷಸೀಯ ವರ್ತನೆಯನ್ನು ಬಹಿರಂಗಪಡಿಸುತ್ತದೆ.


ಮಾತುಕತೆ ನಡೆಸಲು ಠಾಣೆಗೆ ತೆರಳಿದ್ದ ಎಸ್.ಡಿ.ಪಿ.ಐ ನಾಯಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾಗಿದ್ದ ಪೊಲೀಸ್ ಅಧಿಕಾರಿ ದರ್ಪ ಮೆರೆದಿರುವುದು ಅಕ್ಷಮ್ಯ. ಜೊತೆಗೆ ತನ್ನ ತಪ್ಪನ್ನು ಮರೆಮಾಚಲು ಅವರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನಾರ್ಹ. ದೌರ್ಜನ್ಯ ನಡೆಸಿ ಅಮಾನವೀಯವಾಗಿ ನಡೆದುಕೊಂಡ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಪಡಿಸಬೇಕು ಮತ್ತು ಇಲಾಖಾ ತನಿಖೆಗೆ ಒಳಪಡಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಆಗ್ರಹಿಸಿರುವ ಅಬ್ದುಲ್ಲತೀಫ್ ಪುತ್ತೂರು, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version