Home ಟಾಪ್ ಸುದ್ದಿಗಳು ಲೋಕಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿ ಬಂಧನವಾಗುತ್ತೆ: ಅಸ್ಸಾಂ ಸಿಎಂ

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಗಾಂಧಿ ಬಂಧನವಾಗುತ್ತೆ: ಅಸ್ಸಾಂ ಸಿಎಂ

ಗುವಾಹಟಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಚುನಾವಣೆ ನಂತರ ಬಂಧಿಸಲಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ನಾವು ಎಸ್‌ಐಟಿ ರಚಿಸಿ ತನಿಖೆ ನಡೆಸುತ್ತೇವೆ. ರಾಹುಲ್‌ ಬಂಧನ ಆಗುವಂತೆ ನೋಡಿಕೊಳ್ಳುತ್ತೇವೆ. ಆದರೆ ಈಗಲ್ಲ. ಲೋಕಸಭೆ ಚುನಾವಣೆಯ ನಂತರ. ನಾವು ಈಗ ಕ್ರಮ ಕೈಗೊಂಡರೆ, ಅದು ರಾಜಕೀಯ ಪ್ರೇರಿತ ಎಂಬ ಆರೋಪ ನಮ್ಮ ಮೇಲೆ ಕೇಳಿಬರುತ್ತದೆ. ಹೀಗಾಗಿ ಈಗ ಬಂಧಿಸಲ್ಲ ಎಂದರು. ರಾಹುಲ್‌ ಯಾತ್ರೆಯ ಸಂಪೂರ್ಣ ಉದ್ದೇಶವು ಅಸ್ಸಾಂನ ಶಾಂತಿ ಕದಡುವುದು. ಆದರೆ ಇದಕ್ಕೆ ಅವಕಾಶ ನೀಡಲ್ಲ. ನಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡಿದ ಹಿನ್ನೆಲೆಯಲ್ಲಿ ಗುವಾಹಟಿ ಪೊಲೀಸರು ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಸೇರಿದಂತೆ ಹಲವು ನಾಯಕರ ವಿರುದ್ಧ ಸ್ವಯಂಪ್ರೇರಿತ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಯಾವುದೇ ಸಂದರ್ಭದಲ್ಲಿ ಶ್ರೀನಿವಾಸ್‌ ಸೇರಿದಂತೆ ಇತರೆ ನಾಯಕರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಹುಲ್‌ ಯಾತ್ರೆಗೆ ಮಂಗಳವಾರ ಗುವಾಹಟಿ ನಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಗುವಾಹಟಿ ಪ್ರವೇಶಕ್ಕೆ ಪಟ್ಟು ಹಿಡಿದು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಮುರಿದು ಒಳನುಗ್ಗಲು ಯತ್ನಿಸಿದರು. ಅಸ್ಸಾಂನಲ್ಲಿ ಶಾಂತಿ ಕದಡಲು ರಾಹುಲ್‌ ಯತ್ನಿಸಿದ್ದಾರೆ ಎಂದು ಅವರ ವಿರುದ್ಧ ಸಿಎಂ ಸೂಚನೆ ಮೇಲೆ, ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದರು.

Join Whatsapp
Exit mobile version