Home ಟಾಪ್ ಸುದ್ದಿಗಳು ಸರ್ಕಾರ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪ: ಕಾಂಗ್ರೆಸ್ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ರಾಹುಲ್...

ಸರ್ಕಾರ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪ: ಕಾಂಗ್ರೆಸ್ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ

ಹೊಸದಿಲ್ಲಿ: ‘ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ 40% ಸರ್ಕಾರ ಎಂದು ಭ್ರಷ್ಟಾಚಾರದ ಆರೋಪ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಆದರೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪಗಳು ಬಲವಾಗಿ ಕೇಳಿಬರುತ್ತಿವೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ’ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಖಂಡತುಂಡವಾಗಿ ಹೇಳಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (AICC) ಕರ್ನಾಟಕ ಕಾಂಗ್ರೆಸ್ ನಾಯಕರ ಜತೆ ದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ರಾಜ್ಯ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ವಿರುದ್ಧ ನಾವು ಭ್ರಷ್ಟಾಚಾರದ ಆರೋಪ ಮಾಡಿದ್ದೆವು. ಈಗ ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಬಂದರೆ ಹೇಗೆ? ನಾವು ಭ್ರಷ್ಟಾಚಾರದ ಆರೋಪವನ್ನು ಸಹಿಸಲು ಸಾಧ್ಯವೇ ಇಲ್ಲ. ಭ್ರಷ್ಟಾಚಾರ ಆರೋಪವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಖಡಕ್ ಸೂಚನೆ ನೀಡಿದ್ದಾರೆ.

ಭ್ರಷ್ಟಾಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ನಮ್ಮದು. ಅದೆಂತಹ ದೊಡ್ಡ ನಾಯಕರೇ ಇರಲಿ, ಭ್ರಷ್ಟಾಚಾರ ವಿಚಾರದಲ್ಲಿ ಸಹಿಸಿಕೊಳ್ಳಲ್ಲ. ನಾಯಕರು, ಕಾರ್ಯಕರ್ತರು ಪಕ್ಷದಿಂದ ಅಂತರ ಕಾಯ್ದುಕೊಳ್ಳಬಾರದು. ನನಗೆ ಪಕ್ಷದ ಕಾರ್ಯಕರ್ತರೇ ಮುಖ್ಯ. ನಾನು ಮತ್ತೊಬ್ಬರನ್ನು ಸಚಿವರನ್ನಾಗಿಸಬಹುದು. ಆದರೆ ಮತ್ತೊಬ್ಬ ಕಾರ್ಯಕರ್ತರನ್ನು ಕರೆತರಲಾರೆ. ಹೀಗಾಗಿ ಕಾರ್ಯಕರ್ತರನ್ನು ಸಹಿಸದ ಸಚಿವ ನಮಗೂ ಬೇಡ ಎಂದು ರಾಹುಲ್ ಗಾಂಧಿ ಹೇಳಿದರು.

ಭ್ರಷ್ಟಾಚಾರದ ಬಗ್ಗೆ ಎಚ್ಚರವಹಿಸಿ: ಮಲ್ಲಿಕಾರ್ಜುನ ಖರ್ಗೆ ಸೂಚನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ರಾಜ್ಯ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದರು. ಭ್ರಷ್ಟಾಚಾರದ ವಿಚಾರ ಊಹಾಪೋಹವೋ, ಆರೋಪವೋ, ಕೆಲವೊಂದಿಷ್ಟು ಮಾಹಿತಿ ನಮ್ಮ ತನಕ ಬಂದಿದೆ. ಕೂಡಲೇ ಆ ಬಗ್ಗೆ ಎಚ್ಚರವಹಿಸಿ. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಖರ್ಗೆ ಎಚ್ಚರಿಕೆ ನೀಡಿದರು. ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬಂದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೋಕಸಭೆ ಚುನಾವಣೆಯೇ ಟಾರ್ಗೆಟ್

ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೋಕಸಭೆ ಚುನಾವಣೆಯೇ ಟಾರ್ಗೆಟ್ ಆಗಿದೆ. ಅವರವರ ಜಿಲ್ಲೆಯಲ್ಲಿ ಗೆಲುವೇ ಮಾನದಂಡವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದರು. ಕೆಲ ಸಚಿವರು ಕೆಪಿಸಿಸಿ ಕಚೇರಿಗೂ ಹೋಗಿಲ್ಲ. ವಾರಕ್ಕೊಮ್ಮೆ ಸಚಿವರು ಕಾಂಗ್ರೆಸ್ ಕಚೇರಿಗೆ ತೆರಳಲು ಸೂಚಿಸಿದ್ದೇವೆ. ಆದರೆ ಕೆಲ ಸಚಿವರು ಕೆಪಿಸಿಸಿ ಕಚೇರಿಯನ್ನೇ ಮರೆತು ಹೋಗಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಕಾಂಗ್ರೆಸ್ ಕಚೇರಿ ಆರಂಭಿಸಿ. ‘ಕೈ’ ಕಚೇರಿ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮಕೈಗೊಳ್ಳಿ. ಲೋಕಸಭೆ ಚುನಾವಣೆಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಇನ್ನೋರ್ವ ಕಾಂಗ್ರೆಸ್ ನಾಯಕರಿಗೆ ಜವಾಬ್ದಾರಿ ನೀಡಲಾಗುತ್ತೆ. ಈಗಿನಿಂದಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲು ಆರಂಭಿಸಿ ಎಂದು ವೇಣುಗೋಪಾಲ್ ರಾಜ್ಯ ನಾಯಕರಿಗೆ ಸೂಚನೆ ನೀಡಿದರು.

Join Whatsapp
Exit mobile version