Home ಟಾಪ್ ಸುದ್ದಿಗಳು ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ನವದೆಹಲಿ: ಪ್ರಧಾನಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಗುಜರಾತ್’ನ ಸೂರತ್ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ 2019 ರಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣದಲ್ಲಿ ಗುಜರಾತ್ ನ ಸೂರತ್ ನ್ಯಾಯಾಲಯ ರಾಹುಲ್’ಗೆ ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ರಾಹುಲ್ ಗಾಂಧಿಗೆ 30 ದಿನಗಳ ಜಾಮೀನು ನೀಡಲಾಗಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಹಾಜರಾಗಲು ಸೂರತ್ ಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ರಾಜ್ಯದ ಪಕ್ಷದ ಉನ್ನತ ನಾಯಕರು ಸ್ವಾಗತಿಸಿದರು.

ಗಾಂಧಿ ಅವರನ್ನು ‘ಶೇರ್-ಎ-ಹಿಂದೂಸ್ತಾನ್’ (ಹಿಂದೂಸ್ತಾನದ ಸಿಂಹ) ಎಂದು ಹೊಗಳುವ ಪೋಸ್ಟರ್’ಗಳು ಮತ್ತು “ಬಿಜೆಪಿಯ ಸರ್ವಾಧಿಕಾರದ ಮುಂದೆ ಕಾಂಗ್ರೆಸ್ ತಲೆಬಾಗುವುದಿಲ್ಲ” ಎಂಬ ಬರಹಗಳುಳ್ಳ ಫಲಕಗಳನ್ನು ಬೆಂಬಲಿಗರು ಮತ್ತು ಪಕ್ಷದ ಸದಸ್ಯರು ಪ್ರದರ್ಶಿಸಿದರು.

ಬಿಜೆಪಿ ಶಾಸಕ ಮತ್ತು ಗುಜರಾತ್’ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿತ್ತು. “ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮವನ್ನು ಹೇಗೆ ಹೊಂದಿದ್ದಾರೆ?” ಎಂದು ರಾಹುಲ್ ಗಾಂಧಿ 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕರ್ನಾಟಕದ ಕೋಲಾರದಲ್ಲಿ ಏರ್ಪಡಿಸಿದ್ದ ರಾಲಿಯನ್ನುದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದರು.

Join Whatsapp
Exit mobile version