Home ಟಾಪ್ ಸುದ್ದಿಗಳು ‘ನನ್ನನ್ನೂ ಕೂಡ ಬಂಧಿಸಿ’ : ಮೋದಿಯನ್ನು ಟೀಕಿಸುವ ಪೋಸ್ಟರ್‌ ಅಂಟಿಸಿದವರ ಬಂಧನದ ವಿರುದ್ಧ ರಾಹುಲ್...

‘ನನ್ನನ್ನೂ ಕೂಡ ಬಂಧಿಸಿ’ : ಮೋದಿಯನ್ನು ಟೀಕಿಸುವ ಪೋಸ್ಟರ್‌ ಅಂಟಿಸಿದವರ ಬಂಧನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಹೊಸದಿಲ್ಲಿ : ಕೋವಿಡ್ ನಿರ್ವಹಣೆಯಲ್ಲಿ ವಿಫಲರಾದ ಮೋದಿ ಸರ್ಕಾರವನ್ನು ಟೀಕಿಸುವ ಭಿತ್ತಿಪತ್ರವನ್ನು ಅಂಟಿಸಿದ್ದ 25 ಮಂದಿಯ ಬಂಧನದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ‘ನನ್ನನ್ನೂ ಕೂಡ ಬಂಧಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

‘ಮೋದಿಯವರೇ, ನಮ್ಮ ಮಕ್ಕಳಿಗೆ ಲಭಿಸಬೇಕಾದ ಲಸಿಕೆಯನ್ನು ನೀವು ಯಾಕೆ ವಿದೇಶಕ್ಕೆ ಕಳುಹಿಸಿದ್ದೀರಿ?’ ಎಂದು ಪ್ರಶ್ನಿಸುವ ಪೋಸ್ಟರ್ ಕಳೆದ ಕೆಲವು ದಿನಗಳಿಂದ ದೇಶದ ರಾಜಧಾನಿಯಾದ್ಯಂತ ಪ್ರತ್ಯಕ್ಷಗೊಂಡಿತ್ತು. ರಾಹುಲ್ ಗಾಂಧಿಯವರಲ್ಲದೆ, ಕಾಂಗ್ರೆಸ್ ಮುಖಂಡರಾದ ಅಭಿಷೇಕ್ ಸಿಂಘ್ವಿ ಮತ್ತು ಪಿ ಚಿದಂಬರಂ ಕೂಡ ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 21 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಬಂಧಿತರಲ್ಲಿ 19 ವರ್ಷದ ಅನಕ್ಷರಸ್ಥ ಯುವಕ, 30 ವರ್ಷದ ಆಟೋ ಚಾಲಕ, 61 ವರ್ಷದ ದಿನಗೂಲಿ ನೌಕರ ಇದ್ದು, ಹಲವರು ದಿನಗೂಲಿ ಕೆಲಸ ಮಾಡುವವರು. ಭಿತ್ತಿಪತ್ರದಲ್ಲಿ ಏನು ಬರೆದಿದೆ ಎಂಬುದು ಕೂಡ ಅವರಿಗೆ ತಿಳಿದಿಲ್ಲ. ಬ್ಯಾನರ್ ಮತ್ತು ಪೋಸ್ಟರ್ ಪ್ರಿಂಟ್ ಮಾಡಿಸಿದವನು, ಆಟೋದಲ್ಲಿ ಸಾಗಿಸಿದವನು ಮತ್ತು ಅದನ್ನು ಅಂಟಿಸಿದವರನ್ನು ಬಂಧಿಸಲಾಗಿದೆ. ಅವರೆಲ್ಲರೂ ತಮ್ಮ ಹೊಟ್ಟೆಪಾಡಿಗಾಗಿ ಕೆಲಸ ಮಾಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್‌ ವರದಿ ಮಾಡಿದೆ.

ಕೋವಿಡ್ ಎರಡನೇ ಅಲೆಯಿಂದ ದೆಹಲಿಯ ಜನತೆ ತತ್ತರಿಸಿದ್ದು, ಆಮ್ಲಜನಕದ ಕೊರತೆಯಿಂದ ಅನೇಕರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೋವಿಡ್ ಸೋಂಕು ಕಳೆದ ಮೂರು ವಾರಗಳಿಂದ ದೇಶದಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಜನರ ಮೇಲೆ ಪರಿಣಾಮ ಬೀರಿದೆ. ಆಸ್ಪತ್ರೆಗಳಲ್ಲಿ ಅನೇಕರಿಗೆ ಸಮರ್ಪಕ ಚಿಕಿತ್ಸೆ, ಆಮ್ಲಜನಕ ಅಥವಾ ಹಾಸಿಗೆಗಳು ಲಭಿಸದೆ ಸಾವನ್ನಪ್ಪುತ್ತಿದ್ದಾರೆ.

Join Whatsapp
Exit mobile version