22 ಯೋಧರ ಸಾವಿಗೆ ಕಾರಣವಾದ ಛತ್ತೀಸ್‌ಗಡದ ನಕ್ಸಲ್ ಕಾರ್ಯಾಚರಣೆ ಅಸಮರ್ಥ; ರಾಹುಲ್ ಗಾಂಧಿ

Prasthutha|

ದೆಹಲಿ: ಇಪ್ಪತ್ತೆರಡು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾದ ಛತ್ತೀಸ್‌ಗಡದ ನಕ್ಸಲ್ ಕಾರ್ಯಾಚರಣೆ ಅಸಮರ್ಥವಾಗಿದ್ದು, ಕಾರ್ಯಾಚರಣೆಯ ರೂಪುರೇಷೆಯೂ ಸಮರ್ಪಕವಾಗಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ನಮ್ಮ ಯೋಧರು ಎಂದೂ ಬಂದೂಕುಗಳಿಗೆ ಆಹಾರವಾಗಿ ಸ್ವ ಇಚ್ಛೆಯಿಂದ ಹುತಾತ್ಮರಾಗುವಂತಹ ಮನಸ್ಥಿತಿಯುಳ್ಳವರಲ್ಲ‘ ಎಂದು ಹೇಳಿದ್ದಾರೆ.

- Advertisement -

‘ಕಾರ್ಯಾಚರಣೆಯಲ್ಲಿ ಗುಪ್ತದಳದ ವೈಫಲ್ಯವಿಲ್ಲ. ಘಟನೆಯಲ್ಲಿ ಯೋಧರು ಹುತಾತ್ಮರಾಗಿರುವಷ್ಟೇ ಮಾವೊವಾದಿ ಉಗ್ರರರೂ ಸತ್ತಿದ್ದಾರೆ‘ ಎಂದು ಸಿಆರ್‌ಪಿಎಫ್‌ ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದ್ದವು. ಆ ಹೇಳಿಕೆ ಉಲ್ಲೇಖಿಸಿದ ರಾಹುಲ್ ಗಾಂಧಿ, ‘ಗುಪ್ತದಳ ವೈಫಲ್ಯವಿಲ್ಲ, ಸತ್ತವರ ಪ್ರಮಾಣ 1:1 ಅನುಪಾತದಂತಿದೆ ಎಂದಾದರೆ ಈ ಕಾರ್ಯಾಚರಣೆಯನ್ನು ಸರಿಯಾಗಿ ರೂಪಿಸಿಲ್ಲ, ಇದೊಂದು ಅಸಮರ್ಥ ಕಾರ್ಯಾಚರಣೆ ಎಂದು ಅರ್ಥವಲ್ಲವೇ‘ ಎಂದು ಪ್ರಶ್ನಿಸಿದ್ದಾರೆ.

ಛತ್ತೀಸ್‌ಗಡದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ  22 ಮಂದಿ ಭದ್ರತಾ ಸಿಬ್ಬಂದಿ ಸಿಆರ್‌ಪಿಎಫ್‌ನ ಯೋಧರು ಹುತಾತ್ಮರಾಗಿದ್ದರು. ಘಟನೆಯಲ್ಲಿ 31 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -