ಕೊಯಂಬತ್ತೂರು: ಕ್ರಿಕೆಟ್ ಚರಿತ್ರೆಯ ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ ತನ್ನ ಸಹ ಆಟಗಾರನನ್ನೇ ನಾಯಕ ಮೈದಾನದಿಂದ ಹೊರ ಕಳುಹಿಸಿದ ಘಟನೆ ನಡೆದಿದೆ. ಕೊಯಂಬತ್ತೂರ್‌ನಲ್ಲಿ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ತಂಡದ ಯಶಸ್ವಿ ಜೈಸ್ವಾಲ್, ತಂಡದ ನಾಯಕ ಅಜಿಂಕ್ಯ ರಹಾನೆಯ ಕೋಪಕ್ಕೆ ಗುರಿಯಾಗಿ ಮೈದಾನದಿಂದ ಹೊರ ಕಳುಹಿಸಿದ ಘಟನೆ ಕೂಡ ನಡೆಯಿತು.
ಆಗಿದ್ದೇನು ?
ಕೊಯಂಬತ್ತೂರಿನ ಎಸ್‌ಎನ್‌ಆರ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಶ್ಚಿಮ ಮತ್ತು ದಕ್ಷಿಣ ವಲಯ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ ಅಂತಿಮ ದಿನ, ಭಾನುವಾರ 4 ವಿಕೆಟ್‌ಗಳ ನೆರವಿನಿಂದ 373 ರನ್‌ಗಳಿಸಬೇಕಾದ ಕಠಿಣ ಗುರಿ ದಕ್ಷಿಣ ವಲಯದ ಮುಂದಿತ್ತು.
ಆದರೆ ಫೈನಲ್ ಪಂದ್ಯದ ಅಂತಿಮ ದಿನದ ಬೆಳಗಿನ ಅವಧಿಯಲ್ಲಿ ಆಟಗಾರರ ಮಧ್ಯೆ ಸ್ಲೆಡ್ಜಿಂಗ್ ವಿವಾದ ಉಂಟಾಗಿದೆ. 50ನೇ ಓವರ್ ವೇಳೆ ದಕ್ಷಿಣ ವಲಯದ ಬ್ಯಾಟರ್ ಟಿ ರವಿತೇಜ ಮತ್ತು ಪಶ್ಚಿಮ ವಲಯದ ಯಶಸ್ವಿ ಜೈಸ್ವಾಲ್ ಮಧ್ಯೆ ಮಾತು ಬೆಳೆದಿದೆ. ಇಬ್ಬರಿಗೂ ಫೀಲ್ಡ್ ಅಂಪೈರ್ಗಳು ಎಚ್ಚರಿಕೆ ನೀಡಿದ್ದರು. ಆದರೂ ಬಿಡದ ಜೈಸ್ವಾಲ್ ಮತ್ತೆ ಕೆಣಕ್ಕಿದ್ದಾರೆ. ಇದರಿಂದ ರವಿತೇಜ ಈ ಬಗ್ಗೆ ಅಂಪೈರ್ಗೆ ದೂರಿದ್ದಾರೆ. ಮಧ್ಯಪ್ರವೇಶಿಸಿದ ನಾಯಕ ಅಜಿಂಕ್ಯಾ ರಹಾನೆ ಇಬ್ಬರು ಆಟಗಾರರನ್ನು ಸಮಾಧಾನ ಮಾಡಿದರು.
ಒಂದು ಹಂತದಲ್ಲಿ ಅಜಿಂಕ್ಯಾ ರಹಾನೆ ಮಾತನಾಡುತ್ತಿದ್ದಂತೆಯೇ ಜೈಸ್ವಾಲ್, ರವಿತೇಜರನ್ನು ನಿಂದಿಸುತ್ತಿದ್ದರು. ರಹಾನೆ ಆತನನ್ನು ಸಮಾಧಾನ ಮಾಡಲು ಕರೆದೊಯ್ದರು. ಸ್ವಲ್ಪ ಸಮಯದ ಬಳಿಕ ಅಜಿಂಕ್ಯಾ ರಹಾನೆ, ಯಶಸ್ವಿ ಜೈಸ್ವಾಲ್‌ರನ್ನು ಮೈದಾನದಿಂದಲೇ ಹೊರ ಕಳುಹಿಸಿದರು. ನಾಯಕನ ನಿರ್ಧಾರದಿಂದ ಅಸಮಧಾನಗೊಂಡ ಯಶಸ್ವಿ ಜೈಸ್ವಾಲ್ ಗೊಣಗುತ್ತಲೇ ಹೊರ ನಡೆದರು. ಬಳಿಕ ಇನಿಂಗ್ಸ್‌ನ 65ನೇ ಓವರ್‌ನಲ್ಲಿ ಜೈಸ್ವಾಲ್‌ರನ್ನು ಮತ್ತೆ ಮೈದಾನಕ್ಕೆ ಕರೆಯಿಸಿಕೊಳ್ಳಲಾಯಿತು.
ಯಶಸ್ವಿ ಜೈಸ್ವಾಲ್ ಅಮೋಘ ದ್ವಿಶತಕ (263 ರನ್) ಮತ್ತು ಸರ್ಫರಾಜ್ ಖಾನ್ ಗಳಿಸಿದ ಅಜೇಯ 178 ರನ್ ನೆರವಿನಿಂದ ಪಶ್ಚಿಮ ವಲಯ ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 585 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇದರಿಂದ ದಕ್ಷಿಣ ವಲಯ ತಂಡ ಟ್ರೋಫಿ ಗೆಲ್ಲಲು 529 ರನ್‌ಗಳ ಗುರಿ ಪಡೆದಿತ್ತು. ಆದರೆ ನಾಯಕ ಅಜಿಂಕ್ಯಾ ರಹಾನೆ ಎರಡು ಇನ್ನಿಂಗ್ಸ್‌ಗಳಲ್ಲಿ 8 ಮತ್ತು 15 ರನ್‌ಗಳಿಸಿ ನಿರಾಸೆ ಅನುಭವಿಸಿದರು.