ಕೊಲ್ಕತ್ತಾ: ‘ರವೀಂದ್ರನಾಥ ಟ್ಯಾಗೋರ್ ಅವರು ಬೆಳ್ಳಗಿರಲಿಲ್ಲ. ಹೀಗಾಗಿ ಚಿಕ್ಕಂದಿನಲ್ಲಿ ಟ್ಯಾಗೋರರ ತಾಯಿಯು ಅವರನ್ನು ಎತ್ತಿ ಆಡಿಸಿರಲಿಲ್ಲ’ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಷ್ ಸರ್ಕಾರ ಹೇಳಿದ್ದಾರೆ.
ಟ್ಯಾಗೋರರು ಸ್ಥಾಪಿಸಿದ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು ‘ಟ್ಯಾಗೋರರ ಕುಟುಂಬದ ಇತರ ಸದಸ್ಯರು ಹಳದಿ ಮಿಶ್ರಿತವಾದ ಆಕರ್ಷಕ ಬಿಳುಪಿನ ಮೈಬಣ್ಣ ಹೊಂದಿದ್ದರು. ಆದರೆ, ಟ್ಯಾಗೋರರ ಚರ್ಮದ ಬಣ್ಣ ಎಣ್ಣೆಗೆಂಪಿನಂತಿತ್ತು. ಚರ್ಮದ ಬಣ್ಣದಲ್ಲಿ ಎರಡು ವಿಧಗಳಿವೆ. ಒಂದು ಹಳದಿ ಮಿಶ್ರಿತ ಆಕರ್ಷಕ ಬಿಳುಪಿನ ಬಣ್ಣ. ಎರಡನೇಯದು, ಎಣ್ಣೆಗೆಂಪು. ಗುರುಗಳು (ಟ್ಯಾಗೋರರು) ಎರಡನೇ ವಿಧಾನದ ಚರ್ಮದ ಬಣ್ಣ ಹೊಂದಿದ್ದರು. ಅವರ ಮೈಬಣ್ಣದ ಕಾರಣಕ್ಕಾಗಿ ಅವರ ತಾಯಿಯಾಗಲಿ ಮತ್ತು ಕುಟುಂಬದ ಇತರರಾಗಲಿ ರವೀಂದ್ರನಾಥರನ್ನು ತಮ್ಮ ತೋಳುಗಳಲ್ಲಿ ಎತ್ತಿ ಆಡಿಸಲಿಲ್ಲ. ಮಡಿಲಲ್ಲಿ ಕೂರಿಸಿಕೊಳ್ಳಲಿಲ್ಲ’ ಎಂದು ಸರ್ಕಾರ್ ಹೇಳಿದರು.
ಸರ್ಕಾರ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳು ಅವರ ಮಾತುಗಳನ್ನು ಖಂಡಿಸಿದ್ದಾರೆ. ಸರ್ಕಾರ ಅವರ ಈ ಹೇಳಿಕೆಯನ್ನು ಖಂಡಿಸಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, ‘ಇದು ರಾಜ್ಯದ ಆಸ್ಮಿತೆಯಾದ ಟ್ಯಾಗೋರರಿಗೆ ಮಾಡಿದ ಅಪಮಾನ’ ಎಂದಿದೆ.