ಹೊಸದಿಲ್ಲಿ: ಹಿಂದುತ್ವ ರಾಜಕಾರಣವನ್ನು ಬಿಟ್ಟು ಎಲ್ಲಾ ವರ್ಗಗಳ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಎಂದು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಸರಿಸಲಾಗಿದ್ದ ಇ ಶ್ರೀಧರನ್ ಪಕ್ಷಕ್ಕೆ ಸಲಹೆ ನೀಡಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, “ಬಿಜೆಪಿಯು ತಮ್ಮ ಧೋರಣೆಯನ್ನು ಬದಲಾಯಿಸಬೇಕು. ಪಕ್ಷವು ಕೇವಲ ಹಿಂದು ಧರ್ಮ ಅಥವಾ ಮತ್ತು ಹಿಂದುತ್ವದ ಮೇಲೆ ಹೆಚ್ಚು ಗಮನ ನೀಡಬಾರದು. ಹಿಂದುಗಳಿಗೆ ಮಾತ್ರವಲ್ಲದೆ ಕೇರಳದ ಎಲ್ಲಾ ವರ್ಗದ ಜನತೆಯ ಪರ ಇದ್ದೇವೆ ಎಂಬ ಸಂದೇಶವನ್ನು ನೀಡಬೇಕು. ಅವರು ಎಲ್ಲಾ ವರ್ಗಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಾರೆಂಬ ಭಾವನೆ ಜನರಿಗೆ ಮೂಡಬೇಕು. ಈ ಮೂಲಭೂತ ಬದಲಾವಣೆಯ ಅಗತ್ಯವಿದೆ” ಎಂದು ಅವರು ಹೇಳಿದರು.