ಮಧ್ಯಸ್ಥಿಕೆ ಮೂಲಕ ಪರಸ್ಪರ ವ್ಯಾಜ್ಯಗಳ ತ್ವರಿತ ಇತ್ಯರ್ಥದಿಂದ ಹಣ, ಸಮಯದ ಉಳಿತಾಯ: ನ್ಯಾ. ಎಸ್. ಸುಜಾತ

Prasthutha: December 20, 2021
✍️ನಂಜುಂಡಪ್ಪ.ವಿ.

ನ್ಯಾಯದಾನ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಹೆಜ್ಜೆ

ಬೆಂಗಳೂರು: ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರ್ಯಾಯ ನ್ಯಾಯದಾನ ಮಾಡುವ ಮಧ್ಯಸ್ಥಿಕೆ ಕೇಂದ್ರಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತ್ವರಿತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಾಂತಿ ಮಾಡುತ್ತಿವೆ. ಕೆಲವು ಪ್ರಕರಣಗಳು ಕೆಲವೇ ಗಂಟೆಗಳಲ್ಲಿ ಇತ್ಯರ್ಥವಾದರೆ ಮತ್ತೆ ಕೆಲ ಪ್ರಕರಣಗಳು ಕೆಲವು ದಿನಗಳಲ್ಲಿ ಬಗೆಹರಿಯುತ್ತಿವೆ. ದಶಕಗಳ ಕಾಲ ಬಗೆಹರಿಯದ ಪ್ರಕರಣಗಳು ಗರಿಷ್ಠ 60 ರಿಂದ 90 ದಿನಗಳಲ್ಲಿ ಮುಕ್ತಾಯಗೊಳ್ಳುತ್ತಿವೆ.

ದೇಶಾದ್ಯಂತ ಮಧ್ಯಸ್ಥಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಹೈಕೋರ್ಟ್ ನಲ್ಲಿರುವ ಬೆಂಗಳೂರು ಮೀಡಿಯೇಷನ್ ಸೆಂಟರ್ ಮಾದರಿಯಾಗಿದೆ. ಇಲ್ಲಿನ ನ್ಯಾಯದಾನ ವ್ಯವಸ್ಥೆ ಬಗ್ಗೆ ಹಲವು ರಾಜ್ಯಗಳ ಪರಿಣಿತರು ಅಧ್ಯಯನ ಮಾಡಿ ಇಲ್ಲಿನ ಉತ್ತಮ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಕೇಂದ್ರ ಪ್ರತಿನಿತ್ಯ ನ್ಯಾಯಾಲಯದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪರಿಣಿತರು ವ್ಯಾಜ್ಯ ಇತ್ಯರ್ಥಕ್ಕೆ ನೆರವಾಗುತ್ತಿದ್ದು, ಪರಸ್ಪರ ಒಪ್ಪಿಗೆ ಮೂಲಕ ಸಮ್ಮತಿಸುವ ಪ್ರಕರಣಗಳಿಗೆ ನ್ಯಾಯಾಲಯ ಒಪ್ಪಿಗೆ ಮುದ್ರೆ ಒತ್ತುತ್ತದೆ. ಇಲ್ಲಿ ಅಂತಿಮವಾಗಿ ವ್ಯಾಜ್ಯಕಾರರಿಬ್ಬರಿಗೂ ಜಯ ದೊರೆಯಲಿದೆ. ಯಾರಿಗೂ ಸೋಲಾಗುವುದಿಲ್ಲ. ಇಲ್ಲಿನ ನ್ಯಾಯದಾನ ಪ್ರಶ್ನಿಸಿ ಮೇಲ್ಮನವಿಗೆ ತೆರಳುವಂತಿಲ್ಲ. ಪರಸ್ಪರ ಒಪ್ಪಿಗೆ ಸೂಚಿಸಿದರೆ ನ್ಯಾಯಾಲಯದ ಶುಲ್ಕದ ಬಹುತೇಕ ಭಾಗ ವಾಪಸ್ ಬರುತ್ತದೆ, ಸಮಯವೂ ಉಳಿಯುತ್ತದೆ. ಸಂಬಂಧಗಳು ಸಹ ಗಟ್ಟಿಯಾಗುತ್ತವೆ. ಅಂತಿಮವಾಗಿ ನ್ಯಾಯ ಗೆಲ್ಲುವಂತಹ ವಿನೂತನ ವ್ಯವಸ್ಥೆಯಾಗಿವೆ ಮಧ್ಯಸ್ಥಿಕೆ ಕೇಂದ್ರಗಳು.

ಮಧ್ಯಸ್ಥಿಕೆ ಕಾರ್ಯನಿರ್ವಹಣೆ ಬಗ್ಗೆ ರಾಜ್ಯ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರೂ ಆದ ಜಸ್ಟೀಸ್ ಎಸ್. ಸುಜಾತ ಅವರೊಂದಿಗೆ ಹಿರಿಯ ಪತ್ರಕರ್ತ ನಂಜುಂಡಪ್ಪ ವಿ. ನಡೆಸಿದ ಅನೌಪಚಾರಿಕ ಮಾತುಕತೆ ಇಲ್ಲಿದೆ.

ಮಧ್ಯಸ್ಥಿಕೆ ಎಂದರೇನು? ಇದೂ ಕೂಡಾ ನ್ಯಾಯಾಲಯದಲ್ಲಿಯೇ ನಡೆಯುತ್ತದೆಯೇ?

ಇದೊಂದು ಪರ್ಯಾಯ ವ್ಯಾಜ್ಯ ಪರಿಹಾರ ಪ್ರಕ್ರಿಯೆ. ಇದು ನ್ಯಾಯಾಲಯದ ಪ್ರಕ್ರಿಯೆ ಅಲ್ಲ. ಇಷ್ಟಕ್ಕೂ ಮಧ್ಯಸ್ಥಿಕೆದಾರರು ನ್ಯಾಯಾಧೀಶರಲ್ಲ.

ನ್ಯಾಯಾಲಯದಲ್ಲಿ ನ್ಯಾಯಾಧೀಶರು ತೀರ್ಮಾನ ಮಾಡುವ ಹಾಗೆ ಮಧ್ಯಸ್ಥಿಕೆಯಲ್ಲಿ ಮಧ್ಯಸ್ಥಿಕೆದಾರರು ತೀರ್ಮಾನ ಮಾಡುತ್ತಾರೆಯೇ?

ಪಕ್ಷಕಾರರು ಮಧ್ಯಸ್ಥಿಕೆದಾರರ ಸಹಾಯದಿಂದ ಸಂಧಾನದ ಮೂಲಕ ಅವರ ಸಮಸ್ಯೆಗಳಿಗೆ ಅವರೇ ಪರಿಹಾರ ಕಂಡುಕೊಳ್ಳುವಂತಹ ಪ್ರಕ್ರಿಯೆ ಇದಾಗಿದೆ.

ಮಧ್ಯಸ್ಥಿಕೆಯ ಪ್ರಕ್ರಿಯೆ ಬಗ್ಗೆ ವಿವರಣೆ ಕೊಡುತ್ತೀರಾ?

ಇದು ಸ್ವಇಚ್ಛಾ ಪ್ರಕ್ರಿಯೆ. ಇಲ್ಲಿ ಪಕ್ಷಕಾರರೇ ಪ್ರಮುಖರು. ರಚನಾತ್ಮಕ ಕಾರ್ಯವಿಧಾನವನ್ನು ಇಲ್ಲಿ ಅನುಸರಿಸಲಾಗುತ್ತದೆ. ಇದು ಅನೌಪಚಾರಿಕವಾದ ಕ್ರಮವನ್ನು ಒಳಗೊಂಡಿದೆ. ಸಂಧಾನಕ್ಕೆ ಸಹಕರಿಸುವ ಪ್ರಕ್ರಿಯೆ. ಮಧ್ಯಸ್ಥಿಕೆದಾರರಲ್ಲಿ ತಟಸ್ಥವಾಗಿದ್ದು, ಇದು ನ್ಯಾಯ ನಿರ್ಣಯ ಮಾಡುವ ಪ್ರಕ್ರಿಯೆ ಅಲ್ಲ. ಗೌಪ್ಯವಾದ ಪ್ರಕ್ರಿಯೆ. ಪಕ್ಷಕಾರರಲ್ಲಿ ಒಮ್ಮತ ಮೂಡಿಬಂದಾಗ ಒಪ್ಪಂದಪತ್ರವನ್ನು ವಕೀಲರ ಸಹಾಯದಿಂದ ಬರೆಯಲಾಗುತ್ತದೆ. ಅದನ್ನು ನ್ಯಾಯಾಲಯಕ್ಕೆ ಕಳುಹಿಸಿ ಡಿಕ್ರಿ ಮಾಡಿದ ನಂತರ ಅದು ಅಂತಿಮವಾಗುತ್ತದೆ. ಮೊಕದ್ದಮೆಯ ಚೌಕಟ್ಟಿನ ಹೊರಗಿನ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಅವಕಾಶವಿರುತ್ತದೆ. ಸಂಧಾನ ಸಫಲವಾದಲ್ಲಿ ನ್ಯಾಯಾಲಯದ ಶುಲ್ಕ ವಾಪಾಸ್ ಬರುತ್ತದೆ. ನಿಗದಿತ ಸಮಯ ಅಂದರೆ 60 ದಿನ ಅಥವಾ 90 ದಿನದಲ್ಲಿ ಮುಗಿಯುವ ಪ್ರಕ್ರಿಯೆ ಇದಾಗಿದೆ.

ಮಧ್ಯಸ್ಥಿಕೆ ಪ್ರಕ್ರಿಯೆಯಿಂದ ಪಕ್ಷಕಾರರಿಗೆ ಯಾವ ರೀತಿಯ ಅನುಕೂಲವಾಗುತ್ತದೆ?

ಮಧ್ಯಸ್ಥಿಕೆ ಪಕ್ಷಕಾರರ ವೇದಿಕೆ. ಪಕ್ಷಕಾರರೇ ಪ್ರಮುಖವಾಗಿರುವುದರಿಂದ ಮಧ್ಯಸ್ಥಿಕೆಯನ್ನು ಪಕ್ಷಕಾರರೇ ನಿಯಂತ್ರಿಸುತ್ತಾರೆ. ಪಕ್ಷಕಾರರಿಗೆ ಅವರ ಸಮಸ್ಯೆಗಳನ್ನು, ಅಹವಾಲುಗಳನ್ನು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಮಂಡಿಸಲು ಅವಕಾಶವಿದೆ. ಇದೊಂದು ಸ್ವಇಚ್ಛಾ ಪ್ರಕ್ರಿಯೆ ಆಗಿರುವುದರಿಂದ ಸಕಾರಾತ್ಮಕ ಫಲ ಸಿಗುವ ಜತೆಗೆ ಸಮಸ್ಯೆ ಬಗೆಹರಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ತ್ವರಿತಗತಿಯಿಂದ ಪರಿಣಾಮಕಾರಿಯಾಗಿ ಕಡಿಮೆ ಖರ್ಚಿನಲ್ಲಿ ವ್ಯಾಜ್ಯಗಳು ಬಗೆಹರಿಯುತ್ತವೆ. ತುಂಬಾ ಸರಳ ಮತ್ತು ಮಣಿಸಬಲ್ಲ ಪ್ರಕ್ರಿಯೆ.   ಅನೌಪಚಾರಿಕವಾದ, ಅನುಕೂಲಕರ ಮತ್ತು ಸೌಹಾರ್ದ ವಾತಾವರಣದಲ್ಲಿ ನಡೆಯುವ,  ನಿಷ್ಪಕ್ಷವಾಗಿ, ಶುದ್ಧ ಮತ್ತು ತಟಸ್ಥವಾಗಿ ನಡೆಯುವ ಪ್ರಕ್ರಿಯೆ. ಪರಿಣಾಮಕಾರಿ ಸಂಹವನ ಕೌಶಲ್ಯಗಳನ್ನು ಮಧ್ಯಸ್ಥಿಕೆದಾರರು ಬಳಸುವುದರಿಂದ ರಚನಾತ್ಮಕ, ಅರ್ಥಪೂರ್ಣವಾದ ಸಂಧಾನಗಳು ನಡೆಯುತ್ತವೆ. ಪಕ್ಷಗಾರರ ಸಂಬಂಧಗಳು ವೃದ್ಧಿಯಾಗುತ್ತವೆಯಲ್ಲದೇ ಅವರ ಹಿತಾಸಕ್ತಿಯನ್ನಾಧರಿಸಿ ಒಪ್ಪಂದವಾಗುವುದರಿಂದ ದೂರದೃಷ್ಟಿಯ ಪರಿಹಾರಗಳು ಲಭ್ಯವಾಗುತ್ತವೆ. ಎಲ್ಲಾ ಪಕ್ಷಕಾರರ ಹಿತದೃಷ್ಟಿಯನ್ನಾಧರಿಸಿ ಒಪ್ಪಂದವಾಗುವುದರಿಂದ ಪರಸ್ಪರ ಲಾಭವಾಗುವ ಒಪ್ಪಂದಗಳಾಗುತ್ತವೆ. ಇಬ್ಬರೂ ವ್ಯಕ್ತಿಗಳು ಗೆದ್ದಹಾಗೆ ಆಗುತ್ತದೆ. ಇತರೇ ಸಂಬಂಧಿತ ವ್ಯಾಜ್ಯಗಳು ಬಗೆಹರಿಸಲ್ಪಡುತ್ತವೆ ನ್ಯಾಯಾಲಯದ ಶುಲ್ಕವನ್ನು ಬಹುತೇಕ ಪ್ರಮಾಣದಲ್ಲಿ ಹಿಂದಿರುಗಿಸಲಾಗುತ್ತದೆ.

ಯಾರನ್ನು ಮಧ್ಯಸ್ಥಿಕೆದಾರರನ್ನಾಗಿ ಮಾಡಲಾಗುತ್ತದೆ?

15 ವರ್ಷ ವಕೀಲ ವೃತ್ತಿಯಲ್ಲಿ ಅನುಭವ ಪಡೆದ ವಕೀಲರು ಮಧ್ಯಸ್ಥಿಕೆದಾರರಾಗಲು ಅರ್ಹತೆ ಹೊಂದಿರುತ್ತಾರೆ. ಅಂತಹ ವಕೀಲರನ್ನು ಗುರುತಿಸಿ ಅವರಿಗೆ 40 ಗಂಟೆಗಳ ತರಬೇತಿ ಕೊಡುತ್ತಿದ್ದು, ಈ ಪ್ರಕ್ರಿಯೆ ನಿರಂತರವಾಗಿ ಪರಿಷ್ಕರಿಸಲಾಗುತ್ತದೆ.  ಮಧ್ಯಸ್ಥಿಕೆದಾರರ ಕೌಶಲ್ಯಾಭಿವೃದ್ಧಿಗೆ ಪುರ್ನಮನನ ಕಾರ್ಯಕ್ರಮವನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳಲಾಗುತ್ತಿದೆ. ಸಂಹವನ ಕೌಶಲ್ಯಗಳ ಬಗ್ಗೆ, ಸಂಧಾನಗಳ ಬಗ್ಗೆ, ಇತ್ಯರ್ಥ ಕಗ್ಗಂಟಾದಾಗ ಯಾವ ತಂತ್ರಗಳನ್ನು ಉಪಯೋಗಿಸಬೇಕು, ಮೂರನೇ ವ್ಯಕ್ತಿಗಳನ್ನು ನಿಭಾಯಿಸುವುದು, ಪಕ್ಷಕಾರರು ಭಾವೋದ್ರೇಕಕ್ಕೊಳಗಾದಾಗ ನಿಭಾಯಿಸುವುದು, ತಂತ್ರಗಾರಿಕೆ ಎಲ್ಲಾ ವಿಷಯಗಳ ಬಗ್ಗೆ ತರಬೇತಿ ಕೊಡಲಾಗುತ್ತದೆ.

ಮಧ್ಯಸ್ಥಿಕೆ ಹಾಗೂ ಕೌನ್ಸಿಲಿಂಗ್ ಪ್ರಕ್ರಿಯೆ ಒಂದೇ ತೆರನಾಗಿತ್ತದೆಯೋ ಅಥವಾ ಬೇರೆ ಬೇರೆ ಬೇರೆಯೇ?

ಮಧ್ಯಸ್ಥಿಕೆಗೂ ಹಾಗೂ ಸಲಹಾ ಪ್ರಕ್ರಿಯೆಗೂ ಮತ್ತು ಮಧ್ಯಸ್ಥಿಕೆದಾರರಿಗೂ ಹಾಗೂ ಸಲಹೆಗಾರರಿಗೂ ತುಂಬಾ ವ್ಯತ್ಯಾಸವಿದೆ. ಮಧ್ಯಸ್ಥಿಕೆದಾರರು ಯಾವ ಸಮಯದಲ್ಲೂ ಸಲಹೆಗಳನ್ನು ಕೊಡುವ ಹಾಗಿಲ್ಲ. ಪಕ್ಷಗಾರರಿಗೆ ಒತ್ತಾಯಿಸುವಂತಿಲ್ಲ. ಕೊಟ್ಟ ಆಯ್ಕೆಗಳನ್ನು ಒಪ್ಪುವಂತೆ ಒತ್ತಡ ಹೇರುವಂತಿಲ್ಲ. ಮಧ್ಯಸ್ಥಿಕೆಗಾರರು ಆಯ್ಕೆಯ ಅವಕಾಶಗಳನ್ನು ಪಕ್ಷಕಾರರ ಮುಂದಿಡಬಹುದಷ್ಟೆ. ಮುಂದಿಟ್ಟ ಆಯ್ಕೆಯ ಅವಕಾಶಗಳನ್ನು ಆಯ್ದುಕೊಳ್ಳುವುದು ಪಕ್ಷಕಾರರಿಗೆ ಬಿಟ್ಟ ವಿಷಯ. ಮಧ್ಯಸ್ಥಿಕೆದಾರರು ತಮ್ಮ ಸಂಹವನ ಕೌಶಲ್ಯಗಳಿಂದ ಪರೋಕ್ಷವಾಗಿ ಪಕ್ಷಕಾರರಿಗೆ ಅರ್ಥಮಾಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಆಯ್ಕೆಗಳನ್ನು ಒಪ್ಪುವುದು ಅಂತಿಮವಾಗಿ ಪಕ್ಷಕಾರರರಿಗೆ ಬಿಡಲಾಗಿದೆ. ಒತ್ತಾಯ, ಬಲಾತ್ಕಾರಗಳಿಂದ ಮಧ್ಯಸ್ಥಿಕೆದಾರರು ಅವರ ಅಭಿಪ್ರಾಯಗಳನ್ನು ಪಕ್ಷಕಾರರ ಮೇಲೆ ಹೇರುವಂತಿಲ್ಲ. ಯಾಕೆಂದರೆ ಮಧ್ಯಸ್ಥಿಕೆದಾರರು ತಟಸ್ಥರಾಗಿರಬೇಕಾಗುತ್ತದೆ. ಒತ್ತಾಯಿಸಿದರೆ ತಟಸ್ಧತೆಗೆ ಭಂಗ ಬಂದು ಪಕ್ಷಕಾರರು ಮಧ್ಯಸ್ಥಿಕೆಯನ್ನು ತ್ಯಜಿಸುತ್ತಾರೆ. ಮಧ್ಯಸ್ಥಿಕೆ ವಿಫಲವಾಗುತ್ತದೆ. ಆದರೆ ಕೌನ್ಸಿಲಿಂಗ್ ವಿಚಾರದಲ್ಲಿ ಸಲಹೆಗಾರರು ಸಲಹೆಗಳನ್ನು ನೀಡುತ್ತಾರೆ. ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಒತ್ತಾಯ, ಸಲಹೆಗಳನ್ನು ಕೊಡುವುದು ಸಹಜವಾಗಿರುತ್ತದೆ. ಸಲಹಾ ಪ್ರಕ್ರಿಯೆಯಲ್ಲಿ ತಟಸ್ಥತೆ ಪ್ರಮುಖ ಪಾತ್ರವನ್ನು ವಹಿಸುವುದಿಲ್ಲ.

ಇದಕ್ಕೇನಾದರೂ ನಿರ್ದಿಷ್ಟವಾದ ಕಾನೂನು ಇದೆಯಾ?, ಮಧ್ಯಸ್ಥಿಕೆಗೆ ಕಾನೂನಿನ ಮನ್ನಣೆ ಇದೆಯೇ?

ಸಿವಿಲ್ ಪ್ರೊಸೀಜರ್ ಕೋಡ್ ನಿಯಮ 89ರಡಿ ಪರ್ಯಾಯ ವ್ಯಾಜ್ಯ ಪರಿಹಾರ ಪ್ರಕ್ರಿಯೆಯ ಪ್ರಾಕಾರಗಳನ್ನು ವಿವರಿಸಲಾಗಿದೆ. ನ್ಯಾಯಾಧೀಶರು ಯಾವ ಮೊಕದ್ದಮೆಯಲ್ಲಾದರೂ ಸಂಧಾನದ ಕುರುಹುಗಳು, ಲಕ್ಷಣಗಳಿವೆಯೆಂದು ಕಂಡು ಬಂದರೆ ಮಧ್ಯಸ್ಥಿಕೆ ಕೇಂದ್ರಕ್ಕೆ ಇತ್ಯರ್ಥಕ್ಕೆ ಕಳುಹಿಸುತ್ತಾರೆ. ಇದಕ್ಕೆ ಪೂರಕವಾಗಿ ಉಚ್ಛನ್ಯಾಯಾಲಯ ಕರ್ನಾಟಕ ಮಿಡಿಯೇಷನ್ ನಿಯಮಗಳು 2006 ಅನ್ನು ರಚಿಸಿದೆ. ಆದರೆ ಇದಕ್ಕೆ ಪೂರ್ಣಪ್ರಮಾಣದ ಶಾಸನ ಇನ್ನು ಆಗಬೇಕಿದೆ. ಈಗಾಗಲೇ ಕರಡು ಶಾಸನ ರಚಿಸಲಾಗಿದ್ದು ಸಂಸತ್ತಿನಲ್ಲಿ ಮಂಡಿಸಬೇಕಾಗಿದೆ.

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಕಾರ್ಯವೈಖರಿ ಬಗ್ಗೆ ಸ್ವಲ್ಪ ಹೇಳ್ತೀರಾ?

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಇಡೀ ಭಾರತದಲ್ಲಿ ಹೆಸರುವಾಸಿಯಾದ ಕೇಂದ್ರ. ಇದು ಹೈಕೋರ್ಟ್ ನಿಂದ 2007 ರಲ್ಲಿ ಪ್ರಾರಂಭವಾಗಿದೆ. ಇದರ ಕಾರ್ಯ ವೈಖರಿ ರೂಪರೇಷೆಗಳನ್ನು ಉಚ್ಚ ನ್ಯಾಯಾಲಯವೇ ರೂಪಿಸಿದೆ. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಮಧ್ಯಸ್ಥಿಕೆದಾರರು ಕರ್ನಾಟಕ ಮಧ್ಯಸ್ಥಿಕೆ ನಿಯಮ 2006 ರ ಚೌಕಟ್ಟಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಈ ಮಧ್ಯಸ್ಥಿಕೆ ಕೇಂದ್ರಕ್ಕೆ ಮುಖ್ಯಸ್ಥರು ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಅಲ್ಲದೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಪರಿಷತ್ತಿನಿಂದ ತನ್ನ ಕಾರ್ಯ ನಿರ್ವಹಿಸುತ್ತಿದೆ. ಇತರೆ ನಾಲ್ಕು ಜನ ನ್ಯಾಯಮೂರ್ತಿಗಳು ಪರಿಷತ್ತಿನ ಸದಸ್ಯರಾಗಿರುತ್ತಾರೆ. ಆಡಳಿತ ನಿರ್ವಹಣೆಗೆ ನಿರ್ದೇಶಕರು, ಉಪನಿರ್ದೇಶಕರು ನೇಮಕಗೊಂಡಿದ್ದು, ಜೊತೆಗೆ ಇತರೇ 21 ಉಚ್ಚ ನ್ಯಾಯಾಲಯದ ಸಿಬ್ಬಂದಿಯನ್ನು ಇದಕ್ಕೆ ನಿಯೋಜಿಸಲ್ಪಟ್ಟಿದ್ದಾರೆ. ಒಟ್ಟು 117 ಮಧ್ಯಸ್ಥಿಕೆದಾರರಿದ್ದಾರೆ.ಅಲ್ಲದೆ ಈ ಮಧ್ಯಸ್ಥಿಕೆದಾರರ ತರಬೇತಿಗೆಂದು 6 ಮಹಾತರಬೇತುದಾರರು ಹಾಗೂ 17 ತರಬೇತುದಾರರು ನಿಯೋಜಿಸಲ್ಪಟ್ಟಿದ್ದಾರೆ. 2007 ರಿಂದ ಒಟ್ಟು ಸರಿಸುಮಾರು 85,000 ಮೊಕದ್ದಮೆಗಳು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ ನ್ಯಾಯಾಲಯಗಳಿಂದ ವರ್ಗಾವಣೆಯಾಗಿದ್ದು, ಸುಮಾರು 45,000 ಮೊಕದ್ದಮೆಗಳು ಇತ್ಯರ್ಥವಾಗಿದ್ದು, ಶೇಕಡಾ 64% ರಷ್ಟು ಯಶೋಗಾಥೆ ಈ ಕೇಂದ್ರದ್ದಾಗಿದೆ.  ವ್ಯಾಜ್ಯಪೂರ್ವ ಮಧ್ಯಸ್ಥಿಕೆ ವೇದಿಕೆಯನ್ನು ಕೂಡಾ ಇಲ್ಲಿ ಸ್ಥಾಪಿಸಲಾಗಿದೆ.

ಮಧ್ಯಸ್ಥಿಕೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆಯೆ?

ಪ್ರಾಂತೀಯ ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆಯು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಅಧೀನಕ್ಕೊಳಪಟ್ಟಿದೆ. ಆರ್ಥಿಕ ನಿರ್ವಹಣೆ ಕರ್ನಾಟಕ ಕಾನೂನು ನೆರವಿನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ. ಮಧ್ಯಸ್ಥಿಕೆದಾರರ ನೇಮಕ, ತರಬೇತಿ, ಶಿಸ್ತುಕ್ರಮ ಎಲ್ಲವೂ ಕೂಡ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ನಿರ್ವಹಿಸುತ್ತದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿರುವ ನ್ಯಾಯಾಲಯಗಳಲ್ಲಿ ನ್ಯಾಯಾಯಗಳಿಂದ ಕಳುಹಿಸಲ್ಪಟ್ಟ ಮೊಕದ್ದಮೆಗಳನ್ನು ಮಧ್ಯಸ್ಥಿಕೆದಾರರು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸುತ್ತಾರೆ. 

ಭಾರತದಲ್ಲಿ ಮಧ್ಯಸ್ಥಿಕೆ ನ್ಯಾಯ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ?

ಎಲ್ಲಾ ರಾಜ್ಯಗಳಲ್ಲಿಯೂ ಕೈಕೋರ್ಟ್ ಸುಪರ್ದಿಯಲ್ಲಿ ಮಧ್ಯಸ್ಥಿಕೆ ಕೇಂದ್ರಗಳಡಿ ಕಾರ್ಯ ನಿರ್ವಹಿಸುತ್ತವೆ. ಹಾಗೆಯೇ ಪ್ರಾಂತೀಯವಾಗಿಯೂ ಮಧ್ಯಸ್ಥಿಕೆ ಕೇಂದ್ರಗಳು ಸ್ಥಾಪಿಸಲ್ಪಟ್ಟಿದ್ದು, ಇಡೀ ದೇಶದಲ್ಲಿ ಮಧ್ಯಸ್ಥಿಕೆ ಪ್ರಚಲಿತಕ್ಕೆ ಬಂದಿದೆ. ಮಧ್ಯಸ್ಥಿಕೆ ಪ್ರಕ್ರಿಯೆಗೆ ಕಾನೂನಿನ ಚೌಕಟ್ಟು ಅಂದರೆ ತನ್ನದೇ ಆದ ಶಾಸನ ಇಲ್ಲದೇ ಇದ್ದದ್ದು ಮಧ್ಯಸ್ಥಿಕೆಯ ಬೆಳವಣಿಗೆ, ಪ್ರಗತಿಗೆ ಹಿನ್ನಡೆ ಆಗಿದೆ. ಈಗಾಗಲೇ ಕರಡು ಮಸೂದೆ  ತಯಾರಾಗಿದ್ದು ಸಂಸತ್ತಿನ ಮೂಲಕ ಇದು ಶಾಸನವಾಗಿ ಹೊರ ಬರುವ ಸಾಧ್ಯತೆ ಇದ್ದು ಶೀರ್ಘ  ಇನ್ನೂ ಹೆಚ್ಚಿನ ಮಾನ್ಯತೆ ಸಿಗುವುದಲ್ಲಿ ಸಂದೇಹ ಇಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಮಧ್ಯಸ್ಥಿಕೆ ಒಂದು ಚಳುವಳಿ ರೂಪದಲ್ಲಿ ಮೂಡಿಬರುತ್ತದೆ ಮತ್ತು ನ್ಯಾಯಾಲಯಗಳ ಹೊರೆ ಕಡಿಮೆ ಮಾಡುತ್ತದೆ. ಸಮಾಜದಲ್ಲಿ ವ್ಯಾಜ್ಯಗಳು ಶೀಫ್ರವಾಗಿ ಪರಿಹರಿಸಲ್ಪಡುತ್ತದೆ, ಶಾಂತಿ ನೆಲಸುತ್ತದೆ.

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಅಧ್ಯಕ್ಷರಾಗಿ ಯಾವ ಯೋಜನೆಗಳನ್ನು ಹಾಕಿಕೊಂಡಿದ್ದೀರಿ?

ಸಮಾಜದಲ್ಲಿ ಮಧ್ಯಸ್ಥಿಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಸ್ಥಿಕೆಯ ಅರಿವು ಮತ್ತು ಉಪಯೋಗದ ಜತೆಗೆ  ನ್ಯಾಯಾಧೀಶರಿಗೂ ಕೂಡಾ ಮಧ್ಯಸ್ಥಿಕೆಯ ಬಗ್ಗೆ ತರಬೇತಿ ಕೊಡುವ ಕಾರ್ಯಕ್ರಮದ ಯೋಜನೆ ರೂಪಿಸಬೇಕಿದೆ. ನ್ಯಾಯಾವಾದಿಗಳಿಗೂ ಕೂಡ ಮಧ್ಯಸ್ಥಿಕೆಯ ವಕೀಲ ವೃತ್ತಿ ಎಂಬ ವಿಷಯವಾಗಿ ತರಬೇತಿ ಕೊಡುವ ಬಗ್ಗೆ ಚಿಂತಿಸಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!