Home ಕರಾವಳಿ ಮಂಗಳೂರು | ಶಾಲೆಗಳಲ್ಲಿ ಭಗವದ್ಗೀತೆ, ಕುರಾನ್, ಬೈಬಲ್ ಹೇಳಿ ಕೊಡಲಿ, ಆದರೆ ಗುಣಮಟ್ಟದ ಶಿಕ್ಷಣ ಮುಖ್ಯ:...

ಮಂಗಳೂರು | ಶಾಲೆಗಳಲ್ಲಿ ಭಗವದ್ಗೀತೆ, ಕುರಾನ್, ಬೈಬಲ್ ಹೇಳಿ ಕೊಡಲಿ, ಆದರೆ ಗುಣಮಟ್ಟದ ಶಿಕ್ಷಣ ಮುಖ್ಯ: ಸಿದ್ದರಾಮಯ್ಯ

ಮಂಗಳೂರು: ಶಾಲೆಗಳಲ್ಲಿ ಭಗವದ್ಗೀತೆ, ಕುರಾನ್, ಬೈಬಲ್ ಹೇಳಿ ಕೊಡಲಿ, ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಭಗವದ್ಗೀತೆ ಗೆ ವಿರೋಧಿಯಲ್ಲ. ಮಕ್ಕಳಿಗೆ ನೈತಿಕ ವಿದ್ಯೆ ಕಲಿಸಲು ನಮ್ಮದೇನೂ ತಕರಾರಿಲ್ಲ.  ನಾವು ಸಂವಿಧಾನ ಮತ್ತು  ಸೆಕ್ಯುಲರಿಸಂನಲ್ಲಿ ನಂಬಿಕೆ ಇಟ್ಟವರು ಎಂದು ಹೇಳಿದರು.

ಮಕ್ಕಳಿಗೆ ಮಾರ್ಕೆಟ್  ಗೆ ಅನುಗುಣವಾಗಿ ಕ್ವಾಲಿಟಿ ಎಜುಕೇಶನ್ ನೀಡಬೇಕು. ಭಗವದ್ಗೀತೆಯನ್ನು ಮನೆಗಳಲ್ಲಿ ಮಕ್ಕಳಿಗೆ ಹೇಳಿ ಕೊಡಲ್ವಾ. ನಾನು ಕೂಡ ಹಿಂದೂ. ನನಗೂ ನನ್ನ ಮನೆಯಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತ ಹೇಳಿಕೊಟ್ಟಿದ್ದಾರೆ. ನೈತಿಕ ಶಿಕ್ಷಣ ಬೇಕು ಹಾಗಂತ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳ ಬಾರದು. ನಾನು ಭಗವದ್ಗೀತೆ ,ಕುರಾನ್ , ಬೈಬಲ್ ವಿರೋಧಿ ಯಲ್ಲ. ನಮ್ಮಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಇರಬೇಕು ಎಂದರು.

ಕಾಶ್ಮೀರ್ ಫೈಲ್ಸ್ ಕನ್ನಡಕ್ಕೆ ಡಬ್ಬಿಂಗ್ ವಿಚಾರ ವಾಗಿ ಮಾತನಾಡಿದ ಅವರು, ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ ತೋರಿಸುತ್ತೇವೆ ಅಂದರೆ ಬೇಡ ಅನ್ನೋರು ಯಾರು. ಆದರೆ ಜನರಿಗೆ ಸತ್ಯ ಏನು ನಡೆದಿದೆ ಎಂಬುವುದನ್ನು ತೋರಿಸಬೇಕು. ಕಾಶ್ಮೀರದಲ್ಲಿ ಏನು ನಡೆದಿದೆ ? ಯಾವುದು ಸತ್ಯ ? ಎನ್ನುವುದನ್ನು ತೋರಿಸಬೇಕು ಎಂದು ಹೇಳಿದರು.

 ಕಾಶ್ಮೀರಿ ಪಂಡಿತರು ಸೇರಿದಂತೆ ಬೇರೆ ಸಮುದಾಯದವರೊಂದಿಗೆ ಏನೆಲ್ಲಾ ಆಗಿದೆ ಎಂಬುವುದನ್ನು ತೋರಿಸಬೇಕು. ಹಾಗೇನೇ ಗುಜರಾತ್ ನಲ್ಲಿ ನಡೆದದ್ದು, ಲಖಿಂಪುರದಲ್ಲಿ ನಡೆದದ್ದು ತೋರಿಸಬೇಕು.  ಕಾಶ್ಮೀರ್ ಫೈಲ್ ಸಿನೆಮಾ ವನ್ನು ನಾನು ಇನ್ನೂ ನೋಡಿಲ್ಲ. ನಾನು ಸಿನಿಮಾ ನೋಡೋದೇ ಕಡಿಮೆ. ಸಿನೆಮಾ ನೋಡಲೇಬೇಕು ಅಂತ ಏನಿದೆ ? ಬಹಳ ಸಿನಿಮಾಗಳನ್ನು ನಾನು ನೋಡಿಲ್ಲ. ಅದೇ ಪ್ರಕಾರ ಇದನ್ನೂ ನೋಡಲ್ಲ ಎಂದರು

ನಮ್ಮಲ್ಲಿ ಸಾಫ್ಟ್ ಹಿಂದುತ್ವ ನೂ ಇಲ್ಲ. ಹಾರ್ಡ್ ಹಿಂದುತ್ವನೂ ಇಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟವರು. ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಸಂವಿಧಾನ ನೀಡಿದೆ. ಸಂವಿಧಾನದ ಪ್ರಕಾರ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಹಿಜಾಬ್ ವಿರೋಧಿಸಿ ಮುಸ್ಲಿಂ ಸಂಘಟನೆಗಳ ಬಂದ್ ವಿಚಾರದ ಬಗ್ಗೆ ಮಾತನಾಡಿದ ಅವರು, ಅಸಮಾಧಾನದಿಂದ  ಬಂದ್ ಮಾಡಿದ್ದಾರೆ.  ಕೋರ್ಟ್ ನಿರ್ಧಾರವನ್ನು ವಿರೋಧಿಸಬಾರದು. ಹೈಕೋರ್ಟ್, ಸುಪ್ರೀಂ ಕೋರ್ಟ್ ಯಾವುದರ ನಿರ್ಧಾರವನ್ನೂ ವಿರೋಧ ಮಾಡಬಾರದು. ಯಾವ ಧರ್ಮದವರೂ ಕೋಮುವಾದ ಮಾಡಬಾರದು. ಎಲ್ಲಾ ಧರ್ಮಗಳನ್ನ ಸಮಾನವಾಗಿ ಕಾಣುವ ಕೆಲಸ ಆಗಲಿ ಎಂದು ಹೇಳಿದರು.

Join Whatsapp
Exit mobile version