ಬೆಂಗಳೂರು: ಆಟೋ ಚಾಲಕರು ಮೀಟರ್ ಬಳಸದೆಯೇ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುವುದನ್ನು ತಪ್ಪಿಸಿ ಅನುಚಿತ ವರ್ತನೆ, ಕಿರಿಕಿರಿ ಉಂಟು ಮಾಡಿದರೆ ದೂರು ನೀಡಲು ಸಹಾಯವಾಗುವ ಕ್ಯೂಆರ್ ಕೋಡ್ ಅನ್ನು ಜಾರಿಗೆ ತರಲು ನಗರ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ.
ಕೇವಲ ಎರಡೇ ತಿಂಗಳಲ್ಲಿ ಆ ಕ್ಯೂ ಆರ್ ಕೋಡ್ ಜಾರಿಗೆ ತರಲು ನಗರ ಪೊಲೀಸರು ಎಲ್ಲಾ ರೀತಿಯ ಸಿದ್ಧತೆ ಕೈಗೊಂಡಿದ್ದಾರೆ. ಆಟೋಗಳಲ್ಲಿ ಇಲ್ಲಿಯವರೆಗೆ ಬಳಸುತ್ತಿದ್ದ ಚಾಲಕರ ಅಥವಾ ಮಾಲೀಕರ ಡಿಸ್’ಪ್ಲೇ ಕಾರ್ಡ್ಗಳ ಬದಲಿಗೆ ಕ್ಯೂಆರ್ ಕೋಡ್ ಅಳವಡಿಸಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಆಪ್ ಡೆವಲಪ್ ಮಾಡಲಾಗಿದೆ.
ಇನ್ನೇನು ಕೆಲ ದಿನಗಳಲ್ಲಿ ಇದನ್ನು ಪರಿಚಯಿಸಿ ಎಲ್ಲಾ ಆಟೋಗಳೂ ಡಿಸ್ ಪ್ಲೇ ಕಾರ್ಡ್ ಬದಲಿಗೆ ಈ ಕ್ಯೂ ಆರ್ ಕೋಡ್ ಬಳಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಲಾಗುತ್ತದೆ.
ಇಷ್ಟು ದಿನ ಆಟೋ ಚಾಲಕರ ಪ್ರಾಥಮಿಕ ಮಾಹಿತಿಯ ಫಲಕ ಆಟೋದಲ್ಲಿರುತ್ತಿತ್ತು. ಇನ್ನು ಮುಂದೆ ಆಟೋಗಳಿಗೆ ಕ್ಯೂ ಆರ್ ಕೋಡ್ ಗುರುತು ಜಾರಿಗೆ ತರಲು ಸಂಚಾರ ಪೊಲೀಸರು ಮುಂದಾಗಿ ಅದರ ಕೆಲಸಗಳನ್ನೂ ಶುರು ಮಾಡಿ, ಹೊಸದಾಗಿ ಯಾವುದೇ ಡಿಸ್ ಪ್ಲೇ ಕಾರ್ಡ್ ನೀಡಿರಲಿಲ್ಲ. ಈಗ ಸಂಪೂರ್ಣ ಡಿಜಿಟಲ್ ಆಗಿ ಆಪ್ ಹಾಗೂ ಕ್ಯೂ ಆರ್ ಕೋಡ್ ಮೂಲಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ. ಇದರಲ್ಲಿ ಚಾಲಕನ ಲೈಸೆನ್ಸ್ ನಿಂದ ಹಿಡಿದು ಪ್ರತಿಯೊಂದು ಮಾಹಿತಿಯೂ ಲಭ್ಯವಿರಲಿದೆ ಕೆಲ ಆಟೋ ಚಾಲಕರಿಂದ ಸಮಸ್ಯೆ ಆದರೆ ಕೂಡಲೇ ಕ್ಯೂರ್ ಆರ್ ಕೋಡ್ ದಾಖಲೆ ಪಡೆದು ದೂರು ದಾಖಲಿಸುವ ವ್ಯವಸ್ಥೆಯನ್ನು ಈ ಆಪ್ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಮೇ ಮೊದಲ ವಾರದಲ್ಲಿ ಆಟೋ ಕ್ಯೂ ಆರ್ ಕೋಡ್ ಜಾರಿಯಾಗುವ ಸಾಧ್ಯತೆಗಳಿವೆ.
ಡಿಸ್ಪ್ಲೇ ಬೋರ್ಡ್ ಗೆ ಬದಲಾಗಿ ಕ್ಯೂ ಆರ್ ಕೋಡ್ ಹಾಗೂ ಆಪ್ ಬಗ್ಗೆ ಆಟೋ ಚಾಲಕರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.