ಪಣಜಿ: ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರನ್ನು ಫಿಫಾ ವಿಶ್ವಕಪ್ ಗೆ ಕತಾರ್ ಆಹ್ವಾನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗೋವಾ ಬಿಜೆಪಿ ವಕ್ತಾರ, ಸಾವಿಯೋ ರೋಡ್ರಿಗಸ್, ಸರ್ಕಾರ, ಭಾರತೀಯ ಫುಟ್ಬಾಲ್ ಅಸೋಸಿಯೇಷನ್’ಗಳು ಮತ್ತು ಆತಿಥೇಯ ರಾಷ್ಟ್ರಕ್ಕೆ ಪ್ರಯಾಣಿಸುವ ಭಾರತೀಯರಿಗೆ ಕ್ರೀಡಾ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಝಾಕಿರ್ ನಾಯ್ಕ್ ಅವರನ್ನು ಪ್ರಸ್ತುತ ನಡೆಯುತ್ತಿರುವ ಫಿಫಾ ವಿಶ್ವಕಪ್ ಸಮಯದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಉಪನ್ಯಾಸ ನೀಡಲು ಕತಾರ್ ಆಹ್ವಾನಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಕತಾರ್’ನ ಈ ನಡೆಯನ್ನು ವಿರೋಧಿಸಿ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ.
ಫಿಪಾ ವಿಶ್ವಕಪ್ ಪಂದ್ಯಾವಳಿ ಒಂದು ಜಾಗತಿಕ ಕ್ರೀಡಾಕೂಟ. ಇದನ್ನು ವೀಕ್ಷಿಸಲು ಜಗತ್ತಿನ ವಿವಿಧ ಮೂಲೆಗಳಿಂದ ಜನ ಆಗಮಿಸುತ್ತಾರೆ. ಲಕ್ಷಾಂತರ ಜನ ಟಿ.ವಿ ಹಾಗೂ ಇಂಟರ್’ನೆಟ್ ನಲ್ಲಿ ವೀಕ್ಷಿಸುತ್ತಾರೆ. ವಿಶ್ವವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಝಾಕಿರ್ ನಾಯ್ಕ್’ಗೆ ಅವಕಾಶ ಕೊಡುವುದು, ಮೂಲಭೂತವಾದ ಹಾಗೂ ದ್ವೇಷವನ್ನು ಹರಡಲು ವೇದಿಕೆ ನೀಡಿದಂತೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ