Home ಕ್ರೀಡೆ ಟೋಕಿಯೋ ಒಲಿಂಪಿಕ್ಸ್ | ಬ್ಯಾಡ್ಮಿಂಟನ್ ಫೈನಲ್ ಫೈಟ್’ನಿಂದ ಪಿ.ವಿ.ಸಿಂಧು ಔಟ್

ಟೋಕಿಯೋ ಒಲಿಂಪಿಕ್ಸ್ | ಬ್ಯಾಡ್ಮಿಂಟನ್ ಫೈನಲ್ ಫೈಟ್’ನಿಂದ ಪಿ.ವಿ.ಸಿಂಧು ಔಟ್

ಟೋಕಿಯೋ,ಜು.30; ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಟೋಕಿಯೊ ಒಲಿಂಪಿಕ್ಸ್ ನ ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಸೆಮಿಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ಥಾಯ್ ತ್ಸುಯಿಂಗ್ ವಿರುದ್ದ ಸಿಂಧು 18-21, 12-21 ನೇರ ಸೆಟ್ ಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಆ ಮೂಲಕ ಸಿಂಧು ಮೇಲೆ ಪದಕದ ನಿರೀಕ್ಷೆ ಇಟ್ಟುಕೊಂಡಿದ್ದ ಕೋಟ್ಯಂತರ ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.


ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್ ನಲ್ಲಿ ಮೊದಲ ಸೆಟ್ ನಲ್ಲಿ ಉಭಯ ಆಟಗಾರ್ತಿಯರು ಪ್ರತಿಯೊಂದು ಅಂಕಗಳನ್ನು ಗಳಿಸಲು ಸಾಕಷ್ಟು ಬೆವರು ಹರಿಸಿದ್ದರು. ಅಂತಿಮವಾಗಿ ಚೈನೀಸ್ ತೈಪೆಯ ಆಟಗಾರ್ತಿ 18-21 ಅಂತರದಲ್ಲಿ ಸೆಟ್ ತನ್ನದಾಗಿಸಿಕೊಂಡರು.
ಎರಡನೇ ಸೆಟ್ ನಲ್ಲಿ ಸಿಂಧುಗೆ ಕಮ್’ ಬ್ಯಾಕ್ ಮಾಡಲು ಯಾವುದೇ ಅವಕಾಶ ನೀಡದ ಥಾಯ್ ತ್ಸುಯಿಂಗ್ , 21- 12 ಅಂತರದಲ್ಲಿ ಸೆಟ್ ವಶಪಡಿಸಿಕೊಂಡರು. ಆಮೂಲಕ ನೇರ ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಸಿಂಧು ಪದಕದ ಆಸೆಯನ್ನು ಭಗ್ನಗೊಳಿಸಿದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-13, 22-20 ಅಂತರದಲ್ಲಿ ಜಪಾನ್ ನ ಅಕಾನೆ ಯಮಗುಚಿ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದ್ದರು.


ರಿಯೊ ಒಲಿಂಪಿಕ್ಸ್ ನಲ್ಲಿ ಫೈನಲ್ ಪಂದ್ಯದಲ್ಲಿ ಎಡವಿದ್ದ ಸಿಂಧು ಬಂಗಾರ ಕೈತಪ್ಪಿ ಬೆಳ್ಳಿಗೆ ತೃಪ್ತಿ ಪಟ್ಟು ಕೊಂಡಿದ್ದರು
ಹೀಗಾಗಿ ಕೋಟ್ಯಂತರ ಭಾರತೀಯ ಅಭಿಮಾನಿಗಳ ಕಣ್ಣು ಈ ಬಾರಿ ಮತ್ತೆ ಸಿಂಧುವಿನ ಮೇಲೆ ನೆಟ್ಟಿತ್ತು. ಆದರೆ ಅತ್ಯುತ್ತಮ ಹೋರಾಟ ಪ್ರದರ್ಶಿಸಿ ಸಿಂಧು ಟೋಕಿಯೋ ಒಲಿಂಪಿಕ್ಸ್ ನಿಂದ ನಿರ್ಗಮಿಸಿದ್ದಾರೆ.

ಫೈನಲ್ ನಿಂದ ಹೊರ ಬಿದ್ದರೂ ಕಂಚಿನ ಪದಕಕ್ಕಾಗಿ ಚೀನಾ ಹೀ ಬಿಂಗ್ ಜಿಯಾವೋ ಅವರೊಂದಿಗೆ ಸೆಣಸಲಿದ್ದಾರೆ.

Join Whatsapp
Exit mobile version