ಪುತ್ತೂರು: ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಅವರ ಕಚೇರಿ ಎದುರು ಐವರು ತಲವಾರು ಪ್ರದರ್ಶನ ಮಾಡಿದ ಘಟನೆ ನಗರದ ಮುಕ್ರಂಪಾಡಿಯಲ್ಲಿ ಶುಕ್ರವಾರ ನಡೆದಿದೆ.
ಅರುಣ್ ಕುಮಾರ್ ಪುತ್ತಿಲ ಅವರ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆಯುತ್ತಿದ್ದ ಘಟನೆ ನಡೆದಿದ್ದು, ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದರು ಎನ್ನಲಾಗಿದೆ.
ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದು, ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದ ಮನೀಶ್ ಕುಲಾಲ್ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿನ ಹಾಕಿದ ಸಂದೇಶವೇ ಘಟನೆಗೆ ಕಾರಣ ಎನ್ನಲಾಗಿದೆ.