ಪುತ್ತೂರು: ಸಹಪಾಠಿ ಹಿಂದೂ ವಿದ್ಯಾರ್ಥಿನಿಯೊಂದಿಗೆ ತರಗತಿಯಲ್ಲಿ ಮಾತನಾಡಿದ್ದಾನೆ ಎಂದು ಆರೋಪಿಸಿ ಮುಸ್ಲಿಮ್ ವಿದ್ಯಾರ್ಥಿಯೊಬ್ಬನಿಗೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದಿದೆ.
ಕಬಕ ಕಲಿಂಬಿ ನಿವಾಸಿ ಮುಹಮ್ಮದ್ ಆದಿಲ್ ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದು, ಸದ್ಯ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದಿಲ್ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ.
ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಕಳೆದ ಒಂದು ವಾರದಲ್ಲಿ ಹಲ್ಲೆಗೈದ ಮೂರನೇ ಪ್ರಕರಣ ಇದಾಗಿದೆ. ಈ ಹಿಂದೆಯೂ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು.
ಇತ್ತೀಚೆಗೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಇತರ ಸಂಘಪರಿವಾರದ ಮುಖಂಡರು ಕಾಲೇಜಿನಲ್ಲಿ ‘ಹಿಂದುತ್ವಕ್ಕಾಗಿ ಯುವ ಜನತೆ’ ಎಂಬ ಕಾರ್ಯಕ್ರಮ ನಡೆಸಿದ್ದರು. ಈ ಕಾರ್ಯಕ್ರಮದ ಬಳಿಕ ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಹಲ್ಲೆ ನಡೆಸುತ್ತಿರುವ ಘಟನೆ ಹೆಚ್ಚಾಗಿದೆ. ಪ್ರಾಂಶುಪಾಲರು ಕೂಡ ಇಂತಹ ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಕಾಲೇಜಿನ ಕೆಲವು ವಿದ್ಯಾರ್ಥಿಗಳು ನೋವು ತೋಡಿಕೊಂಡಿದ್ದಾರೆ.
ಪೋಷಕರ ಆತಂಕ
ಪುತ್ತೂರು ಕೊಂಬೆಟ್ಟು ಸರ್ಕಾರಿ ಜೂನಿಯರ್ ಕಾಲೇಜು ಬಡ ಮಕ್ಕಳಿಗೆ ಶೈಕ್ಷಣಿಕ ಆಧಾರಸ್ತಂಭವಾಗಿದ್ದು, ಸುತ್ತಮುತ್ತಲ ನೂರಾರು ಬಡ ಮತ್ತು ಮಧ್ಯಮ ಕುಟುಂಬಗಳು ತಮ್ಮ ಮಕ್ಕಳನ್ನು ಈ ಕಾಲೇಜಿಗೆ ಸೇರಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಉಪನ್ಯಾಸಕ ವರ್ಗವೂ ಇಲ್ಲಿದೆ. ಆದರೆ ಇತ್ತೀಚೆಗೆ ಕೋಮುಸಂಘಟನೆಗಳು ಕ್ಯಾಂಪಸ್ ನೊಳಗೆ ನುಸುಳಿ ಶೈಕ್ಷಣಿಕ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಾಡುತ್ತಿದೆ. ಇದರಿಂದ ಕಾಲೇಜಿನಲ್ಲಿ ದಿನನಿತ್ಯ ಗಲಾಟೆ, ಹಲ್ಲೆ ಘಟನೆಗಳು ನಡೆಯುತ್ತಿವೆ ಹೀಗಾದರೆ ನಮ್ಮ ಮಕ್ಕಳನ್ನು ಹೇಗೆ ಈ ಕಾಲೇಜಿಗೆ ಕಳುಹಿಸುವುದು ಎಂದು ಕೆಲವು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.