Home ಕರಾವಳಿ ಪುತ್ತೂರು: SDPI ವತಿಯಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮ

ಪುತ್ತೂರು: SDPI ವತಿಯಿಂದ ಸಂವಿಧಾನ ದೀಕ್ಷೆ ಕಾರ್ಯಕ್ರಮ

ಪುತ್ತೂರು: ಇಂದು ದೇಶಾದ್ಯಂತ ಸಂವಿಧಾನಕ್ಕೆ ಅಪಚಾರ ಎಸಗುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ದೇಶದ ಸಂವಿಧಾನದಡಿಯಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳಿಗೆ ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ. ಇದು ದೇಶದ ಸಂವಿಧಾನಕ್ಕೆ ಮಾಡುವ ಅಪಚಾರವಾಗಿದ್ದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದರ ವಿರುದ್ಧ ದೇಶದ ಜನತೆ ಒಂದಾಗಿ ಸಂವಿಧಾನವನ್ನು ಉಳಿಸುವ ಪೋಷಿಸುವ ಕೆಲಸ ನಡೆಯಬೇಕಿದೆ ಎಂದು ಪುತ್ತೂರಿನ ಸೈನಿಕ ಭವನದ ಬಳಿ ನ.26ರಂದು ನಡೆದ ಸಂವಿಧಾನ ದೀಕ್ಷೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಪ್ರತಿಜ್ಞೆಗೈದರು.

ಸಂವಿಧಾನದ ಉಳಿವು ನಮ್ಮೆಲ್ಲರ ಜವಾಬ್ದಾರಿ-ಇಬ್ರಾಹಿಂ ಸಾಗರ್
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ ಸಂವಿಧಾನದ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಸಂವಿಧಾನಕ್ಕೆ ಧಕ್ಕೆ ತರಲು ಪ್ರಯತ್ನಿಸುವವರ ವಿರುದ್ಧ ನಾಗರಿಕ ಸಮಾಜ ಜಾಗೃತರಾಗಬೇಕಾಗಿದೆ ಎಂದು ಹೇಳಿದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯ ಈಡೇರಬೇಕಾದರೆ ದೇಶದಲ್ಲಿ ಸಂವಿಧಾನ ಯಥಾವತ್ತಾಗಿ ಅನುಷ್ಠಾನಗೊಳ್ಳಬೇಕು. ಸಂವಿಧಾನ ಹೊಂದಿರುವ ನಮ್ಮ ದೇಶದಲ್ಲಿ ತ್ರೀಶೂಲವನ್ನು ವಿತರಿಸಿ ಜನರನ್ನು ವಿಭಜಿಸುವ ಕೆಲಸವನ್ನು ಕೆಲವು ಸಂಘಟನೆಗಳು ಮಾಡುತ್ತಿದ್ದು ಇದನ್ನು ನೋಡಿಯೂ ನಾವು ಸುಮ್ಮನಾಗಬಾರದು, ಸಂವಿಧಾನವನ್ನು ರಕ್ಷಿಸಲು ನಾವೆಲ್ಲಾ ಒಂದಾಗಬೇಕು ಎಂದು ಅವರು ಹೇಳಿದರು.

ಸಂವಿಧಾನಕ್ಕೆ ಅಪಚಾರ ಮಾಡಲಾಡುತ್ತಿದೆ-ಹಮೀದ್ ಸಾಲ್ಮರ
ಸಂವಿಧಾನದ ಸಂದೇಶ ನೀಡಿದ ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ ಡಾ.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು ದೇಶಕ್ಕಾಗಿ ಅವರು ಬಹಳಷ್ಟು ಕಷ್ಟ, ನಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಅದೇ ಅಂಬೇಡ್ಕರ್ ಅವರ ಸಂವಿಧಾನವನ್ನು ಹಿಡಿದು, ಅವರ ಫೋಟೋ ಇಟ್ಟು ಅನಾಚಾರಗಳನ್ನು ಮಾಡುವ ಮೂಲಕ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಚಾರ ಮಾಡುವ ಕೃತ್ಯ ನಮ್ಮನ್ನು ಆಳುವವರಿಂದಾಗುತ್ತಿದೆ ಎಂದು ಹೇಳಿದರು. ನಮ್ಮ ಪಕ್ಷಕ್ಕೆ ಪ್ರತ್ಯೇಕ ಪ್ರಣಾಳಿಕೆ ಇಲ್ಲ ಎಂದ ಅವರು ಸಂವಿಧಾನವೇ ನಮ್ಮ ಪಕ್ಷದ ಪ್ರಣಾಳಿಕೆಯಾಗಿದೆ ಎಂದು ಹೇಳಿದರು.

ಸಂವಿಧಾನ ಬದಲಾಯಿಸಲು ಹುನ್ನಾರ ನಡೆಯುತ್ತಿದೆ-ಸಿದ್ದೀಕ್ ಕೆ.ಎ
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಸಿದ್ದೀಕ್ ಕೆ.ಎ ಮಾತನಾಡಿ ಭಾರತ ಎಲ್ಲ ಧರ್ಮದವರನ್ನೊಳಗೊಂಡಿರುವ ದೇಶವಾಗಿದ್ದು ಸಂವಿಧಾನ ನಮ್ಮ ದೇಶದ ಉಸಿರಾಗಿದೆ. ಅಂತಹ ಸಂವಿಧಾನವನ್ನೇ ಬುಡಮೇಲು ಮಾಡುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಯವರೇ ನೈತಿಕ ಪೊಲೀಸ್ ಗಿರಿಗೆ ಬೆಂಬಲ ಸೂಚಿಸುವ ಹೇಳಿಕೆ ನೀಡುತ್ತಿರುವಾಗ ಸಂವಿಧಾನ ಎತ್ತ ಸಾಗುತ್ತಿದೆ ಎನ್ನುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಸಂವಿಧಾನವನ್ನು ಬದಲಾಯಿಸಲು ದೇಶದಲ್ಲಿ ಹುನ್ನಾರ ನಡೆಯುತ್ತಿದ್ದು ಇದಕ್ಕೆ ಪ್ರಜ್ಞಾವಂತ ನಾಗರಿಕರು ಅವಕಾಶ ನೀಡಲಾರರು ಎಂದು ಅವರು ಹೇಳಿದರು.
ಅಧಿಕಾರಿಗಳಿಗೆ ಬೆದರಿಕೆ ಹಾಕಲು ಸಂವಿಧಾನದಲ್ಲಿ ಅವಕಾಶವಿದೆಯೇ?
ಜಿಲ್ಲಾಧಿಕಾರಿಗಳು ಸಂವಿಧಾನದಡಿಯಲ್ಲಿ ಇಡೀ ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೊಂದಿದ್ದು ಅಂತಹ ಜಿಲ್ಲಾಧಿಕಾರಿಯವರ ಕೊರಳ ಪಟ್ಟಿ ಹಿಡಿಯುತ್ತೇವೆ ಎಂದು ಒಬ್ಬರು ಬಹಿರಂಗವಾಗಿ ಭಾಷಣ ಮಾಡುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಮಾಜದ ಮಹತ್ತರ ಜವಾಬ್ದಾರಿ ಹೊಂದಿರುವ ಮಹಿಳಾ ಎಸ್ಸೈಯವರ ಕಾಲು ಮುರಿಯುತ್ತೇವೆ ಎಂದು ಇನ್ನೋರ್ವರು ಬೆದರಿಕೆ ಹಾಕುತ್ತಾರೆ. ಹಾಗಾದರೆ ಸಂವಿಧಾನ ಇದಕ್ಕೆಲ್ಲಾ ಅವಕಾಶ ನೀಡುತ್ತದೆಯೇ ಎಂದು ಪ್ರಶ್ನಿಸಿದ ಸಿದ್ದೀಕ್ ಕೆ.ಎ ಅವರು ಅಧಿಕಾರಿಗಳಿಗೆ ಬೆದರಿಕೆ ಹಾಕಿದರೂ ಇದರ ಬಗ್ಗೆ ಯಾರೂ ಧ್ವನಿ ಎತ್ತದೇ ಇರುವುದು ದುರಂತವಾಗಿದೆ ಎಂದು ಹೇಳಿದರು.

ಪ್ರತಿಜ್ಞಾ ವಿಧಿ ಸ್ವೀಕಾರ
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಹೀಂ ಪುತ್ತೂರು ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ವಿಧಾನಸಭಾ ಕ್ಷೇತ್ರ ಸಮಿತಿ ಕೋಶಾಧಿಕಾರಿ ಅಶ್ರಫ್ ಬಾವು, ನಗರ ಕಾರ್ಯದರ್ಶಿ ಜುನೈದ್ ಸಾಲ್ಮರ, ನಗರ ಉಪಾಧ್ಯಕ್ಷ ಲತೀಫ್ ಸಾಲ್ಮರ, ಎಸ್.ಡಿ.ಪಿ.ಐ ಬನ್ನೂರು ವಾರ್ಡ್ ಅಧ್ಯಕ್ಷ ಇಫಾಝ್ ಬನ್ನೂರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಯಹ್ಯಾ ಕೂರ್ನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇಕ್ಬಾಲ್ ಮುರ ವಂದಿಸಿದರು.

Join Whatsapp
Exit mobile version