ಪುತ್ತೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಫಲಿತಾಂಶ ಆಧಾರಿತ ಸೇವೆ ಎಲ್ಲರಿಗೂ ಮಾದರಿ, ನಿರಂತರ ವೀಕ್ಷಣೆಯ ಮೂಲಕ ವಿದ್ಯಾರ್ಥಿಗಳನ್ನು ಗುರಿ ತಲುಪಿಸುವ ಸೆಂಟರ್ ನ ಪ್ರಯತ್ನದಲ್ಲಿ ನಾವು ಜೊತೆ ಇರುತ್ತೇವೆ ಎಂದು ಖ್ಯಾತ ಉದ್ಯಮಿ, ಅಲ್ ಮುಝೈನ್ ಮಾಲಕರಾದ ಝಕರಿಯಾ ಜೋಕಟ್ಟೆ ಹೇಳಿದರು.
ಸೆಂಟರ್ ನ ಕೌನ್ಸಿಲಿಂಗ್ ಹಾಗೂ ವಿದ್ಯಾರ್ಥಿವೇತನ ಪಡೆದು ವಿವಿಧ ಕೋಚಿಂಗ್ ಸೆಂಟರ್ ನಲ್ಲಿ ಕಲಿತು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮಗೆ ಸಮಾಜ ನೀಡುವ ಕೊಡುಗೆಗಳನ್ನು ಸ್ಮರಿಸುತ್ತಾ ಮುಂದೆ ನೀವು ಸಮಾಜಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ 2025ರ ನೀಟ್ ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪೈಕಿ ಸರಕಾರಿ ಮೆಡಿಕಲ್ MBBS ಸೀಟು ಪಡೆದ ಪ್ರತಿ ವಿದ್ಯಾರ್ಥಿಗೆ 50 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಅಲ್ ಮುಝೈನ್ ಸಂಸ್ಥೆ ನೀಡಲಿದೆ ಎಂದು ಅದರ ಮಾಲಕರಾದ ಝಕರಿಯಾ ಹಾಜಿ ಜೋಕಟ್ಟೆ ಘೋಷಿಸಿದರು.