ಅಕಾಲಿದಳ ಕಾರ್ಯಕ್ರಮದೆಡೆಗೆ ಜಾಥಾ ನಡೆಸಿದ ರೈತರ ವಿರುದ್ಧ ಲಾಠಿಜಾರ್ಚ್ ನಡೆಸಿದ ಪೊಲೀಸರು

Prasthutha|

ಅಮೃತಸರ್: ಪಂಜಾಬ್ ನ ಮೊಗಾದಲ್ಲಿ ಶಿರೋಮಣಿ ಅಕಾಲಿದಳದ ಕಾರ್ಯಕ್ರಮದ ಕಡೆಗೆ ಜಾಥಾ ನಡೆಸಿದ ರೈತರ ಗುಂಪನ್ನು ಪೊಲೀಸರು ಗುರುವಾರ ಲಾಠಿಜಾರ್ಜ್ ಮತ್ತು ಜಲ ಫಿರಂಗಿ ಬಳಸಿ ಚದುರಿಸಿದ್ದಾರೆ.

- Advertisement -

ಅಕಾಲಿದಳದ ಮುಖಂಡ ಸುಖ್ ಬೀರ್ ಸಿಂಗ್ ಬಾದಲ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗಿತ್ತು. ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ರೈತರು ಕಾರ್ಯಕ್ರಮದ ವೇದಿಕೆಗೆ ಪ್ರವೇಶಿಸಲು ಮುಂದಾದಾಗ ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದರು.

ಈ ಮಧ್ಯೆ ಮೊಗಾದ ಧಾನ್ಯ ಮಾರುಕಟ್ಟೆಯಲ್ಲಿ ಅಕಾಲಿದಳ ಶಿರೋಮಣಿಯ ಕಾರ್ಯಕ್ರಮಕ್ಕೆ ಬಲವಂತವಾಗಿ ನುಗ್ಗಲು ಯತ್ನಿಸಿದ ಕೆಲವು ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಪೊಲೀಸರ ಎಚ್ಚರಿಕೆಯನ್ನು ಧಿಕ್ಕರಿಸಿ ಪ್ರತಿಭಟನಕಾರರು ಕಲ್ಲು ತೂರಾಟಕ್ಕೆ ಮುಂದಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಚದುರಿಸಲು ಲಾಠಿಚಾರ್ಜ್ ಮತ್ತು ಜಲ ಫಿರಂಗಿಯನ್ನು ಬಳಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಂದ ತೆರವುಗೊಳಿಸಲಾಯಿತು. ಮಾತ್ರವಲ್ಲದೆ ಘಟನೆಗೆ ಸಂಬಂಧಿಸಿದಂತೆ 35 ಪ್ರತಿಭಟನಕಾರರನ್ನು ಬಂಧಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆಯೆಂದು ಮೊಗಾದ ಪೊಲೀಸ್ ವರಿಷ್ಠಾಧಿಕಾರಿ ಧ್ರುಮಾನ್ ನಿಂಬಾಲೆ ತಿಳಿಸಿದ್ದಾರೆ.

ಪ್ರತಿಭಟನಾ ನಿರತ ರೈತರು ಒಂಬತ್ತು ತಿಂಗಳಿನಿಂದ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಈ ಹಿಂದೆ ಅಕಾಲಿದಳ ಮೊಗಾ ಜಿಲ್ಲೆಯ ಬಘಪುರಾಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಕೂಡ ರೈತರು ವಿರೋಧ ವ್ಯಕ್ತಪಡಿಸಿದ್ದರು.

Join Whatsapp