Home ಟಾಪ್ ಸುದ್ದಿಗಳು ಮುಂದುವರಿದ ಪಂಜಾಬ್ ರಾಜಕೀಯ ಬಿಕ್ಕಟ್ಟು: ಮುಖ್ಯಮಂತ್ರಿ ಆಫರ್ ತಿರಸ್ಕರಿಸಿದ ಅಂಬಿಕಾ ಸೋನಿ

ಮುಂದುವರಿದ ಪಂಜಾಬ್ ರಾಜಕೀಯ ಬಿಕ್ಕಟ್ಟು: ಮುಖ್ಯಮಂತ್ರಿ ಆಫರ್ ತಿರಸ್ಕರಿಸಿದ ಅಂಬಿಕಾ ಸೋನಿ

ಚಂಡೀಗಡ: ಪ್ರಸಕ್ತ ಪಂಜಾಬ್ ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಂಜಾಬ್ ನ ನೂತನ ಮುಖ್ಯಮಂತ್ರಿ ಹುದ್ದೆಗೇರುವ ಅವಕಾಶವನ್ನು ಕಾಂಗ್ರೆಸ್ ಹಿರಿಯ ನಾಯಕಿ ಅಂಬಿಕಾ ಸೋನಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಹಠಾತ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನವನ್ನು ಭರ್ತಿಮಾಡುವಂತೆ ಪಕ್ಷದ ಹೈಕಮಾಂಡ್ ಮಾಡಿರುವ ಪ್ರಸ್ತಾಪವನ್ನು ಸೋನಿ ತಿರಸ್ಕರಿಸುವ ಮೂಲಕ ರಾಷ್ಟ್ರ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಪಂಜಾಬ್ ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನಿನ್ನೆ ತಡರಾತ್ರಿ ಪಕ್ಷದ ಶಾಸಕಾಂಗ ಸಭೆಯು ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿತ್ತು. ಈ ಸಭೆಯಲ್ಲಿ ನಡೆದ ಚರ್ಚೆಯಂತೆ ಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪವನ್ನು ನಿರಾಕರಿಸಿರುವ ಅಂಬಿಕಾ ಸೋನಿ ಅವರು, ಪಂಜಾಬ್ ನ ನೂತನ ಮುಖ್ಯಮಂತ್ರಿ ಹುದ್ದೆಗೆ ಸಿಖ್ ಸಮುದಾಯವನ್ನು ಬೆಂಬಲಿಸುವುದಾಗಿ ತಿಳಿಸಿದರು.

ಅಂಬಿಕಾ ಸೋನಿ ಅವರ ಈ ನಿರ್ಧಾರದಿಂದ ಪಕ್ಷದ ಹೈಕಮಾಂಡ್ ಮತ್ತೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪಕ್ಷದ ವೀಕ್ಷಕರು ಶಾಸಕಾಂಗ ಸಭೆ ನಡೆಸಿದ ನಂತರ ಆ ವರದಿಯನ್ನು ಹೈಕಮಾಂಡ್ ಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version