ಚಂಡೀಗಢ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಘೋಷಿಸಿ ಪಂಜಾಬ್ ಕ್ಯಾಬಿನೆಟ್ ನಿರ್ಣಯವನ್ನು ಅಂಗೀಕರಿಸಿದೆ.
ರೈತ ಸಂಘಟನೆಗಳು ಘೋಷಿಸಿರುವ ಭಾರತ್ ಬಂದ್ ಗೆ ಸಂಬಂಧಿಸಿದಂತೆ ನಿರ್ಣಯವನ್ನು ಅಂಗೀಕರಿಸಲಾಗಿದೆ. ಪಂಜಾಬ್ ನ ನೂತನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಸಚಿವರ ತುರ್ತು ಸಭೆ ಕರೆದು ನಂತರ ಮುಖ್ಯಮಂತ್ರಿ ಅಧಿಕೃತ ಹೇಳಿಕೆ ನೀಡಿದ್ದಾರೆ.
“ರೈತರ ಹೋರಾಟಕ್ಕೆ ಬೆಂಬಲವನ್ನು ಘೋಷಿಸಿ ರೈತರ ಬೇಡಿಕೆಗಳನ್ನು ಅಂಗೀಕರಿಸುವ ನಿರ್ಣಯವನ್ನು ಕ್ಯಾಬಿನೆಟ್ ಅಂಗೀಕರಿಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೃಷಿ ಕಾನೂನುಗಳು ರೈತ ವಿರೋಧಿ ಮತ್ತು ಆಹಾರ ಭದ್ರತೆ ವಿರೋಧಿಯಾಗಿದೆ. ಇದು ರೈತರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಚನ್ನಿ ಹೇಳಿದರು.
‘ನಾನು ರೈತರೊಂದಿಗೆ ಇದ್ದೇನೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಒಂದು ವರ್ಷದಿಂದ ನಮ್ಮ ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರ ಧ್ವನಿ ಕೇಳಬೇಕಾದ ಸಮಯ ಇದು” ಎಂದು ಚನ್ನಿ ನಿನ್ನೆ ಟ್ವೀಟ್ ಮಾಡಿದ್ದರು.