ಚಂಡೀಗಡ: ಫೆ.14ಕ್ಕೆ ನಿಗದಿಯಾಗಿದ್ದ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ಫೆ.20ಕ್ಕೆ ಮುಂದೂಡಲಾಗಿದೆ.
ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಕನಿಷ್ಠ ಆರು ದಿನಗಳವರೆಗೆ ಮುಂದೂಡಬೇಕು ಎಂದು ಕೋರಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್, ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಫೆ.14ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಫೆ.20ಕ್ಕೆ ಚುನಾವಣಾ ಆಯೋಗ ಮುಂದೂಡಿದೆ.
ಫೆ.14ರಂದು ಗುರು ರವಿದಾಸ್ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಫೆ. 10ರಿಂದ 16ರವರೆಗಿನ ಅವಧಿಯಲ್ಲಿ ಸುಮಾರು 20 ಲಕ್ಷದಷ್ಟು ಜನರು ಉತ್ತರ ಪ್ರದೇಶದ ಬನಾರಸ್‌ಗೆ ತೆರಳುವುದರಿಂದ ದೊಡ್ಡ ಸಂಖ್ಯೆಯ ಮತದಾರರು ಮತದಾನದಿಂದ ವಂಚಿತರಾಗುತ್ತಾರೆ. ಹೀಗಾಗಿ ಅವರಿಗೂ ಮತದಾನದ ಅವಕಾಶ ಕಲ್ಪಿಸುವ ಸಲುವಾಗಿ ಚುನಾವಣೆಯನ್ನು ಮುಂದೂಡಬೇಕು ಎಂದು ಚನ್ನಿ ಆಯೋಗಕ್ಕೆ ಬರೆದ ಪತ್ರದಲ್ಲಿ ಕೇಳಿಕೊಂಡಿದ್ದರು.
ಫೆ.20ಕ್ಕೆ ಒಂದೇ ಹಂತದಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯ ಫಲಿತಾಂಶ ಮಾರ್ಚ್ 10ಕ್ಕೆ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.