ಪಂಜಾಬ್: ಅಡ್ವೊಕೇಟ್ ಜನರಲ್ ಅವರನ್ನು ಬದಲಾಯಿಸಿದರೆ ಮಾತ್ರ ತಮ್ಮ ರಾಜೀನಾಮೆಯನ್ನು ಹಿಂತೆಗೆಯುವುದಾಗಿ ಷರತ್ತು ಹಾಕಿದ್ದ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಬೇಡಿಕೆಗೆ ಕೊನೆಗೂ ಸಿಎಂ ಚರಣ್ ಜಿತ್ ಚನ್ನಿ ಮಣಿದಿದ್ದು, ರಾಜ್ಯ ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ರಾಜೀನಾಮೆ ಪಡೆಯಬೇಕು ಎಂಬ ಪೂರ್ವ ಷರತ್ತಿನೊಂದಿಗೆ PPCC ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ನವಜೋತ್ ಸಿಂಗ್ ಸಿಧು ಹಿಂಪಡೆದಿದ್ದರು. ಅದರಂತೆ ಅಡ್ವೊಕೇಟ್ ಜನರಲ್ ಡಿಯೋಲ್ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಇದನ್ನು ಚರಣ್‌ಜಿತ್ ಸಿಂಗ್ ಚನ್ನಿ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಪಂಜಾಬ್ ಎಐಸಿಸಿ ಉಸ್ತುವಾರಿ ಹರೀಶ್ ಚೌಧರಿ ಅವರು ಚನ್ನಿ ಮತ್ತು ಸಿಧು ಅವರೊಂದಿಗೆ ಸಭೆ ನಡೆಸಿದ್ದರು. ಅಂತಿಮವಾಗಿ ಸಿಎಂ ಚನ್ನಿ ಅವರು ಮಂಗಳವಾರ ಎಪಿಎಸ್ ಡಿಯೋಲ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಹಿರಿಯ ವಕೀಲರಾಗಿರುವ ಡಿಯೋಲ್ ಅವರನ್ನು ಕಳೆದ ಸೆ.27ರಂದು ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ಚರಣ್‌ಜಿತ್ ಸಿಂಗ್ ಚನ್ನಿ ಸರಕಾರ ನೇಮಕ ಮಾಡಿತ್ತು. ಜತೆಗೆ, ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಅವರನ್ನು ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿತ್ತು. ಈ ನೇಮಕಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಮರುದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ವರಿಷ್ಠರನ್ನು ಭೇಟಿ ಮಾಡಿದಾಗಲೂ ತಮ್ಮ ಹಠಕ್ಕೆ ಅಂಟಿಕೊಂಡಿದ್ದ ಅವರು, ಈ ಇಬ್ಬರ ನೇಮಕಾತಿ ಆದೇಶ ಪಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದರು.
ಈ ಮಧ್ಯೆ ರಾಜಕೀಯ ಲಾಭಕ್ಕಾಗಿ ನನ್ನ ಹಾಗೂ ರಾಜ್ಯ ಸರ್ಕಾರಕ್ಕೆ ನವಜೋತ್ ಸಿಂಗ್ ಸಿಧು ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಡಿಯೋಲ್’ಗೆ ಟ್ವಿಟ್ಟರ್’ನಲ್ಲಿ ತಿರುಗೇಟು ಕೊಟ್ಟಿದ್ದ ಸಿಧು, ನ್ಯಾಯವು ಕುರುಡಾಗಿರಬಹುದು, ಆದರೆ ಪಂಜಾಬ್’ನ ಜನರು ಕುರುಡರಲ್ಲ ಎಂದಿದ್ದಾರೆ. 2015ರ ಸಿಖ್ ಧರ್ಮಗ್ರಂಥಕ್ಕೆ ಅವಮಾನ ಪ್ರಕರಣದ ನಂತರ ನಡೆದ ಪೊಲೀಸರ ಗುಂಡಿನ ದಾಳಿ ಪ್ರಕರಣಗಳಲ್ಲಿ ಮಾಜಿ ಡಿಜಿಪಿ ಸುಮೇದ್ ಸಿಂಗ್ ಸೈನಿ ಪರ ಎಪಿಎಸ್ ಡಿಯೋಲ್ ವಕಾಲತ್ತು ವಹಿಸಿದ್ದರು.