Home ಟಾಪ್ ಸುದ್ದಿಗಳು ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಆರೋಪಿ ಪಿಎಸ್ಐ ಗೆ ನಿರೀಕ್ಷಣಾ ಜಾಮೀನು ನೀಡದಂತೆ...

ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಆರೋಪಿ ಪಿಎಸ್ಐ ಗೆ ನಿರೀಕ್ಷಣಾ ಜಾಮೀನು ನೀಡದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಅರ್ಜಿ

ಚಿಕ್ಕಮಗಳೂರು: ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಪಿಎಸ್‌ಐ ಕೆ. ಅರ್ಜುನ್‌ ಹೊರಕೇರಿ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಲ್ಲ ಎಂದು ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶುಕ್ರವಾರ ತಿಳಿಸಿದ್ದಾರೆ.

ಪ್ರಕರಣವೊಂದರ ವಿಚಾರಣೆ ನೆಪದಲ್ಲಿ ಗೋಣಿಬೀಡು ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ತನ್ನ ತನ್ನ ಬಾಯಿಗೆ ಮೂತ್ರ ಹುಯ್ಯಿಸಿ, ನೆಲದಲ್ಲಿ ಬಿದ್ದಿದ್ದ ಮೂತ್ರದ ಹನಿ ನೆಕ್ಕಿಸಿದ್ದಾರೆ ಎಂದು ಕಿರಗುಂದ ಗ್ರಾಮದ ಯುವಕ ಕೆ ಎಲ್‌ ಪುನೀತ್‌ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಅರ್ಜುನ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

“ಅರ್ಜಿದಾರ ಆರೋಪಿ (ಅರ್ಜುನ್‌) ಪಿಎಸ್‌ಐ ಆಗಿದ್ದು ಇವರಿಗೆ ಜಾಮೀನು ನೀಡಿದಲ್ಲಿ ಇಲಾಖೆಯ ಪ್ರಭಾವ ಬೀರುತ್ತಾರೆ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯವಾಗಿರುವ ಹಾಗೂ ಕಾನೂನಿಗೆ ಬೆಲೆ ಕೊಡದ ಇವರು ನಿರೀಕ್ಷಣಾ ಜಾಮೀನು ದುರುಪಯೋಗಪಡಿಸಿಕೊಂಡು ಪ್ರಾಸಿಕ್ಯೂಷನ್‌ ಪರ ಸಾಕ್ಷ್ಯಾಧಾರಗಳನ್ನು ನಾಶಪಡಿಸಿ ಪ್ರಕರಣಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಫಿರ್ಯಾದಿ (ಕಿರಗುಂದ ಗ್ರಾಮದ ಕೆ ಎಲ್‌ ಪುನೀತ್‌) ಮತ್ತು ಅವರ ಕುಟುಂಬದ ವಿರುದ್ಧ ಮತ್ತೆ ಇಂತಹುದೇ ಗಂಭೀರ ಸ್ವರೂಪದ ಕೃತ್ಯ ಮುಂದುವರೆಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಅರ್ಜಿದಾರ ಆರೋಪಿ ಯಾವುದೇ ಕಾರಣಕ್ಕೂ ಜಾಮೀನು ಪಡೆಯಲು ಅರ್ಹರಲ್ಲ” ಎಂದು ಸಿಆರ್‌ಪಿಸಿ ಸೆಕ್ಷನ್‌ 438ರಡಿ ಸಲ್ಲಿಸಲಾಗಿರುವ ತಕರಾರು ಅರ್ಜಿಯಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌  ಭಾವನ ವಿವರಿಸಿದ್ದಾರೆ.

ಘಟನೆ ಸಂಬಂಧ ಈಗಾಗಲೇ ಪ್ರಕರಣವನ್ನ ಸಿಐಡಿ ತನಿಖೆಗೆ ವಹಿಸಲಾಗಿದೆ.

Join Whatsapp
Exit mobile version