Home ಟಾಪ್ ಸುದ್ದಿಗಳು ಪಿಎಸ್’ಐ ಹಗರಣ: ಬಂಧಿತ ಎಡಿಜಿಪಿ ಅಧಿಕಾರಿ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಲು ಸಿದ್ಧವಿದ್ದರೂ ಸರ್ಕಾರ ಅವಕಾಶ...

ಪಿಎಸ್’ಐ ಹಗರಣ: ಬಂಧಿತ ಎಡಿಜಿಪಿ ಅಧಿಕಾರಿ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಲು ಸಿದ್ಧವಿದ್ದರೂ ಸರ್ಕಾರ ಅವಕಾಶ ನೀಡುತ್ತಿಲ್ಲ: ಸುರ್ಜೇವಾಲ

ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಹುದ್ದೆಯ ಹೆಸರನ್ನು ಬದಲಿಸಬೇಕಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಚಿವರು ರಾಜ್ಯದ ಯುವಕರ ಭವಿಷ್ಯವನ್ನು ಪ್ರತಿ ನಿತ್ಯ ಸರ್ವನಾಶ ಮಾಡುತ್ತಿದೆ. ಬೊಮ್ಮಾಯಿ ಅವರು ರಾಜ್ಯದ ಯುವ ಜನರಿಗೆ 1 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಸರ್ಕಾರದ ಇಲಾಖೆಗಳಲ್ಲಿ ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವರ ಆಡಳಿತದಲ್ಲಿ 1300 ಕೈಗಾರಿಕಾ ಕೇಂದ್ರಗಳು ಬಂದ್ ಆಗಿದ್ದು ಇದರ ಪರಿಣಾಮವಾಗಿ 1 ಲಕ್ಷ ಉದ್ಯೋಗಗಳು ನಷ್ಟವಾಗಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.


ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಹೆಚ್ಚು ಮೊತ್ತ ನೀಡಿದವರಿಗೆ ಹರಾಜು ಮಾಡಲಾಗುತ್ತಿದೆ. ಇದು ಸರ್ಕಾರಿ ಉದ್ಯೋಗಗಳ ಮಾರಾಟವಾಗುವ ಮಂಡಿ ಮಾರುಕಟ್ಟೆಯಂತಾಗಿದೆ. ಪಿಡಬ್ಲೂಡಿ AEE, JEE, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಜಿಲ್ಲಾ ಸಹಕಾರಿ ಬ್ಯಾಂಕ್, ಕೆಪಿಟಿಸಿಎಲ್ ಹುದ್ದೆಗಳು ಸೇರಿದಂತೆ ಎಲ್ಲವೂ ಮಾರಾಟವಾಗುತ್ತಿವೆ. ಇನ್ನು ಆಘಾತಕಾರಿ ಸಂಗತಿ ಎಂದರೆ ಪಿಎಸ್’ಐ ಹುದ್ದೆಗಳು ಕೂಡ ಮಾರಾಟವಾಗಿವೆ. ಆಮೂಲಕ ಕರ್ನಾಟಕದ ಯುವಕರು ತತ್ತರಿಸಿದ್ದಾರೆ ಎಂದು ಹೇಳಿದರು.


54 ಸಾವಿರಕ್ಕೂ ಹೆಚ್ಚು ಯುವಕರು 545 ಹುದ್ದೆಗಳಿಗೆ ಪಿಎಸ್’ಐ ಹುದ್ದೆಗಳಿಗೆ ಅರ್ಜಿ ಹಾಕಿದ್ದು, ಈ ನೇಮಕಾತಿಯಲ್ಲಿ ಪರೀಕ್ಷೆ ಕೇಂದ್ರದಲ್ಲಿ ಕ್ಯಾಮೆರಾ ಬಂದ್ ಮಾಡುವುದು, ಒಎಂ ಆರ್ ಉತ್ತರ ಪತ್ರಿಕೆ ತಿದ್ದುವುದು, ಬ್ಲೂಟೂತ್ ಸೇರಿದಂತೆ ಅಕ್ರಮ ಮಾಡಿ ಈ ಪ್ರತಿ ಹುದ್ದೆಯನ್ನು 80 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಇದಕ್ಕೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹ ಸಚಿವರು ಯಾವುದೇ ಅಕ್ರಮ ನಡೆದಿಲ್ಲ, ಎಲ್ಲವೂ ಸರಿಯಾಗಿದೆ ಎಂದರು. ಅಂತಿಮವಾಗಿ ಈ ಹಗರಣ ಬೆಳಕಿಗೆ ಬಂದ ನಂತರ ಸುಮಾರು 100 ಮಂದಿ ಬಂಧನವಾಗಿದೆ. ಬಿಜೆಪಿ ಶಾಸಕರು ಶಾಸಕರ ಭವನದಲ್ಲಿ ಈ ಹುದ್ದೆ ಮಾರಾಟಕ್ಕೆ ಮಧ್ಯವರ್ತಿಗಳಾಗಿದ್ದು, ಬಿಜೆಪಿ ಭ್ರಷ್ಟ ಜನತಾ ಪಕ್ಷವಾಗಿ ವಿಧಾನಸೌಧವನ್ನು ಹಣ ಪಡೆಯುವ ಭ್ರಷ್ಟಾಚಾರ ಕೇಂದ್ರವಾಗಿ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.


ಈ ಹಗರಣದಲ್ಲಿ ಬಂಧನವಾಗಿರುವ ಎಡಿಜಿಪಿ ಅಧಿಕಾರಿ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಲು ಸಿದ್ಧರಾಗಿದ್ದು, ಸರ್ಕಾರ ಇದಕ್ಕೆ ಅವಕಾಶ ನೀಡುತ್ತಿಲ್ಲ. ಬಿಜೆಪಿ ಶಾಸಕ ಯತ್ನಾಳ್ ಅವರು ಈ ಹಗರಣದಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಅವರ ಮಕ್ಕಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸುರ್ಜೇವಾಲ ದೂರಿದರು.


ಇತ್ತೀಚಿನ ಬೆಳವಣಿಗೆಗಳು ಇನ್ನಷ್ಟು ಆಘಾತಕಾರಿಯಾಗಿವೆ. ಈ ಹಗರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಪೊಲೀಸರನ್ನು ದಬ್ಬಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಈಗ ಆತ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ. ಈಗ ಒಂದು ಪತ್ರ ಬೆಳಕಿಗೆ ಬಂದಿದ್ದು, ಇದರಲ್ಲಿ ಪ್ರಕರಣದ ತನಿಖಾಧಿಕಾರಿ 3 ಕೋಟಿ ಲಂಚದ ಬೇಡಿಕೆ ಇಟ್ಟಿದ್ದು, ಅದರಲ್ಲಿ 76 ಕೋಟಿ ಹಣವನ್ನು ನೀಡಿದ್ದೇನೆ ಎಂದು ಹೇಳಿದ್ದಾನೆ. ಇಡೀ ಹಗರಣವನ್ನು ಮುಚ್ಚಲು ಈ ಬೇಡಿಕೆ ಇಡಲಾಗಿತ್ತು ಎಂದು ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ ಎಂದರು.


ಸಿಎಂ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಾಗ ಜ್ಞಾನೇಂದ್ರ ಅವರ ಮೂಗಿನ ಕೆಳಗೆ ಏನೆಲ್ಲಾ ಆಗುತ್ತಿದೆ? ಮೊದಲು ಹಗರಣ ನಡೆದಿಲ್ಲ ಎಂದರು, ನಂತರ ತನಿಖೆಗೆ ನಿರಾಕರಿಸಿದರು, ಪ್ರತಿಭಟನೆ ನಡೆದ ನಂತರ 100 ಮಂದಿ ಬಂಧನವಾಯಿತು. ಶಾಸಕ ಈ ಹಗರಣದಲ್ಲಿ ಮಧ್ಯವರ್ತಿಯಾಗಿದ್ದಾರೆ, ಬಿಜೆಪಿ ಶಾಸಕರು ಬಿಜೆಪಿ ನಾಯಕರು ಮತ್ತು ಮಕ್ಕಳ ಮೇಲೆ ಆರೋಪ ಮಾಡುತ್ತಾರೆ. ಬಂಧಿತ ಅಧಿಕಾರಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಲು ಸಿದ್ಧರಿದ್ದಾರೆ, ಇಷ್ಟೆಲ್ಲಾ ಆದರೂ ಸರ್ಕಾರ ಸರಿಯಾದ ತನಿಖೆ ನಡೆಸಲು ಮುಂದಾಗುತ್ತಿಲ್ಲ. ಸರ್ಕಾರ ಮತ್ತೆ ಹೊಸ ತನಿಖೆಯನ್ನು ನಡೆಸುತ್ತಿಲ್ಲ. ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಹುದ್ದೆ ಮಾರಾಟವಾಗುತ್ತಿವೆ. ಮಾಜಿ ಗೃಹಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಅವರ ನೆರಳಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿವೆ. ಯತ್ನಾಳ್ ಅವರು ಆರೋಪಿಸಿರುವಂತೆ ಇದೆಲ್ಲದರ ಹಿಂದೆ ಪ್ರಬಲ ರಾಜಕೀಯ ನಾಯಕರ ಪ್ರಭಾವವಿದೆ. ಈ ಪ್ರಕರಣ ಮುಚ್ಚಲು, ಪ್ರಮುಖ ಅಪರಾಧಿಗಳ ರಕ್ಷಣೆ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಈ ಎಲ್ಲಾ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ ಎಂದು ಸುರ್ಜೇವಾಲ ಹೇಳಿದರು.
ಹೀಗಾಗಿ ರಾಜ್ಯ ಸರ್ಕಾರದಿಂದ ನ್ಯಾಯಯುತ ತನಿಖೆ ಅಸಾಧ್ಯ. ಈ ಪ್ರಕರಣದ ತನಿಖಾಧಿಕಾರಿಗಳನ್ನು ತನಿಖೆ ನಡೆಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು. ಗೃಹಸಚಿವರು ಈ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಹೊಂದಿಲ್ಲ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.


ಬಿಜೆಪಿ ಬಿ ಟೀಮ್ ವಿಚಾರವಾಗಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ ಬಿಜೆಪಿ ಸರ್ಕಾರ ರೈತರ ವಿರುದ್ಧ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದಾಗ ಅದಕ್ಕೆ ಬೆಂಬಲ ನೀಡಿದವರು ಯಾರು? ಮೈಸೂರಿನಲ್ಲಿ ಬಿಜೆಪಿ ಮೊದಲ ಮೇಯರ್ ಆಯ್ಕೆ ಮಾಡಲು ಬೆಂಬಲ ನೀಡಿದವರು ಯಾರು? ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಅವರು ಆತ್ಮಸಾಕ್ಷಿಯ ಉತ್ತರ ನೀಡಲಿ ‘ ಎಂದು ತಿರುಗೇಟು ನೀಡಿದರು.

Join Whatsapp
Exit mobile version