ಕಲಬುರಗಿ: ಪಿಎಸ್ ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆಸಲು ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಇಂದು ಸಿಐಡಿ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಐವಾನ್ ಇ ಶಾಹಿ ಅತಿಥಿಗೃಹದ ಸಿಐಡಿ ಕ್ಯಾಂಪ್ ಗೆ ಮುಂಜಾನೆ ಆಗಮಿಸಿ ಶರಣಾದ ಮುಖ್ಯೋಪಾಧ್ಯಾಯ ಕಾಶಿನಾಥ್ ಅವರನ್ನು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಕಾಶಿನಾಥ್ ಮುಖ್ಯೋಪಾಧ್ಯಾಯನಾಗಿದ್ದು ಪರೀಕ್ಷಾ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ. ಕಾಶಿನಾಥ್ ಗಾಗಿ ಸಿಐಡಿ ಪೊಲೀಸರು ಹಲವೆಡೆ ಹುಡುಕಾಟ ನಡೆಸಿದ್ದರು. ಅಂತಿಮವಾಗಿ ತಾನಾಗಿಯೇ ಸಿಐಡಿ ಕಚೇರಿಗೆ ಬಂದಿದ್ದಾನೆ.
ಅಕ್ರಮದ ಕಿಂಗ್ ಪಿನ್ ಗಳಾದ ರುದ್ರಗೌಡ ಪಾಟೀಲ್, ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಜತೆ ಕಾಶಿನಾಥ್ ಸಂಪರ್ಕ ಹೊಂದಿದ್ದ. ಅಕ್ರಮ ನಡೆಸಲು ಸಹಕರಿಸುವಂತೆ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ. ನಂತರ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಏಪ್ರಿಲ್ 10ರಿಂದ ಕಾಣೆಯಾಗಿದ್ದ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಒಟ್ಟು 26 ಆರೋಪಿಗಳನ್ನು ಬಂಧಿಸಲಾಗಿದೆ. ದಿವ್ಯಾ ಹಾಗರಗಿ ಬಂಧನವಾಗುತ್ತಿದ್ದಂತೆ ಕಿಂಗ್ಪಿನ್ ಗಳು ಒಬ್ಬಬ್ಬರೇ ಶರಣಾಗುತ್ತಿದ್ದಾರೆ.
ಈನಡುವೆ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಬಂಧಿತ ಆರೋಪಿ ಶ್ರೀಧರ್ ಪವಾರ್ ನನ್ನು ವಿಚಾರಣೆ ತೀವ್ರಗೊಳಿಸಲಾಗಿದೆ.
ಪಿಎಸ್ಐ ಪರೀಕ್ಷೆ ಅಕ್ರಮ ಹೊರಬೀಳಲು ಪ್ರಮುಖ ಕಾರಣಿಕರ್ತನೇ ಈ ಶ್ರೀಧರ ಪವಾರ್ ಆಗಿದ್ದು, ಪ್ರಕರಣದ ಆರಂಭದಲ್ಲಿ ಬಂಧಿತನಾದ ಮೊದಲನೇ ಆರೋಪಿ ಸೇಡಂ ಮೂಲದ ವಿರೇಶ್ ನ ಒಎಂಆರ್ ಶೀಟ್ ಬಯಲು ಮಾಡುವ ಮೂಲಕ ಪ್ರಕರಣ ಬೆಳಕಿಗೆ ಬರಲು ಕಾರಣನಾಗಿದ್ದ.
ವೀರೇಶ್ ಗೆ ಪರೀಕ್ಷೆಯ ಅಕ್ರಮ ಹಾದಿ ತೋರಿಸಿಕೊಟ್ಟಿದ್ದಲ್ಲದೆ ಕಿಂಗ್ ಪಿನ್ ಗಳನ್ನು ಭೇಟಿ ಮಾಡಿಸಿ ವ್ಯಾಪಾರ ಕುದುರಿಸಿಕೊಟ್ಟಿದ್ದಾನೆ. ಬಳಿಕ ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೇಮಕಾತಿ ತಾತ್ಕಾಲಿಕ ಪಟ್ಟಿಯಲ್ಲಿ ವೀರೇಶನ ಹೆಸರು ಬಂದಾಗ ಹಣಕ್ಕಾಗಿ ಶ್ರೀಧರ ಬೇಡಿಕೆ ಇಟ್ಟಿದ್ದ.
ವೀರೇಶ್ ಹಣ ಕೊಡದಿದ್ದಕ್ಕೆ ಕೋಪಗೊಂಡು ವಿರೇಶನ ಒಎಂಆರ್ ಸೀಟ್ ಅನ್ನು ವಾಟ್ಸಪ್ ಗಳಿಗೆ ಹರಿಬಿಟ್ಟು ಪ್ರಕರಣ ಬೆಳಕಿಗೆ ಬರಲು ಕಾರಣಿಕರ್ತನಾಗಿದ್ದ ಎಂದು ತಿಳಿದುಬಂದಿದೆ.
ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳು ನಡೆಸಿದ್ದಾರೆ.