Home ಟಾಪ್ ಸುದ್ದಿಗಳು ಪಿಎಸ್​ಐ ನೇಮಕಾತಿ ಹಗರಣ| ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಬಿಡುಗಡೆ

ಪಿಎಸ್​ಐ ನೇಮಕಾತಿ ಹಗರಣ| ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಬಿಡುಗಡೆ

ಆನೇಕಲ್​: ಪಿಎಸ್​ಐ ನೇಮಕಾತಿ ಹಗರಣದಲ್ಲಿ ಜೈಲು ಸೇರಿದ್ದ ಐಪಿಎಸ್ ಅಧಿಕಾರಿ ಅಮೃತ್ ಪಾಲ್​ ಬುಧವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಸೆ.25ರಂದು ಅಮೃತ್ ಪಾಲ್​ಗೆ ಹೈಕೋರ್ಟ್ ಜಾಮೀನು ನೀಡಿದ್ದು, ಆದೇಶ ಪ್ರತಿ ಇಂದು ಜೈಲಿಗೆ ತಲುಪಿದ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ. 5 ಲಕ್ಷ ಮೌಲ್ಯದ ಬಾಂಡ್ ಇಬ್ಬರು ಶ್ಯೂರಿಟಿ ಒದಗಿಸಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಕೋರ್ಟ್ ಆನುಮತಿಯಿಲ್ಲದೇ ವಿದೇಶಕ್ಕೆ ಪ್ರಯಾಣಿಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

545 ಪಿಎಸ್‌ಐಗಳ ನೇಮಕಾತಿಗಾಗಿ ಅಕ್ಟೋಬರ್ 3, 2021 ರಂದು 92 ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಮಾಡಲಾಗಿತ್ತು. ಒಟ್ಟು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಸೇರಿದಂತೆ ಹಗರಣಕ್ಕೆ ಸಂಬಂಧಿಸಿದಂತೆ 110 ಜನರನ್ನು ಬಂಧಿಸಲಾಗಿದೆ.

ಈ 52 ಅಭ್ಯರ್ಥಿಗಳು ಯಾವುದೇ ಪೊಲೀಸ್ ನೇಮಕಾತಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನು ಪರೀಕ್ಷೆಯಲ್ಲಿ ರಿಗ್ಲಿಂಗ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ ಶ್ರೇಣಿಯ ಐಪಿಎಸ್ ಅಮೃತ್ ಪಾಲ್​ರನ್ನು ಬಂಧಿಸಿದ್ದರು. ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಅಮೃತ್ ಪಾಲ್ ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈ ಹಿಂದೆ ತಿಳಿಸಿದ್ದರು.

ಪಿಎಸ್ಐ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆಗಳಿದ್ದ ಸ್ಟ್ರಾಂಗ್ ರೂಮ್ ಕೀ ಅಮೃತ್ ಪಾಲ್ ಬಳಿಯಿತ್ತು. ಸ್ಟ್ರಾಂಗ್ ರೂಮ್ ಕೀ ಇತರೆ ಆರೋಪಿಗಳಿಗೆ ನೀಡಿದ್ದು, ಒಎಂಆರ್ ಶೀಟ್‌ ತಿದ್ದಿರುವುದಾಗಿ FSL ವರದಿಯಲ್ಲಿ ದೃಢಪಟ್ಟಿತ್ತು.

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ಸಂಬಂಧ ಬಂಧಿತ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪಾಲ್ ವಿರುದ್ಧ ಭ್ರಷ್ಟ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಜರುಗಿಸಲು ರಾಜ್ಯ ಅಪರಾಧ ತನಿಖಾ ದಳಕ್ಕೆ (ಸಿಐಡಿ) ಕೇಂದ್ರ ಸರಕಾರ ಈಗಾಗಲೇ ಅನುಮತಿ ಕೂಡ ನೀಡಿತ್ತು.

Join Whatsapp
Exit mobile version