ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳ ಮುಂದೆ ಮತ್ತೊಬ್ಬ ಆರೋಪಿ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಶರಣಾಗಿದ್ದಾನೆ.
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಈಗಾಗಲೇ ರುದ್ರಗೌಡ ಮತ್ತು ದಿವ್ಯಾ ಹಾಗರಗಿ ಬಂಧನದ ಬಳಿಕ ಸಿಐಡಿ ಅಧಿಕಾರಿಗಳ ಮುಂದೆ ಕಿಂಗ್ ಪಿನ್ ಮಂಜುನಾಥ್ ಆಟೋದಲ್ಲಿ ಬಂದು ಶರಣಾಗಿದ್ದಾನೆ.
ಅನಾರೋಗ್ಯದ ನೆಪ ಹೇಳಿ ಸಿಐಡಿ ಅಧಿಕಾರಿಗಳಿಗೆ ಬಂದು ಶರಣಾಗಿದ್ದು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
545 ಪಿಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪಿಎಸ್ ಐ ನೇಮಕಾತಿ ಅಕ್ರಮ ಸಂಬಂಧ ನಿನ್ನೆ ನಗರದಲ್ಲಿ 12 ಮಂದಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ.
ಈ ಮಧ್ಯೆ ನಗರದ 5 ಪರೀಕ್ಷಾ ಕೇಂದ್ರದಲ್ಲಿ ಭಾರೀ ಅಕ್ರಮ ನಡೆದಿರುವ ಮಾಹಿತಿ ಲಭ್ಯವಾಗಿದ್ದು ಈ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ವಿಚಾರಣೆ ನಡೆಸಲಾಗಿದೆ.
22 ಮಂದಿಯ ಒಎಂಆರ್ ಶೀಟ್ ಮತ್ತು ಕಾರ್ಬನ್ ಕಾಪಿಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು 22 ಜನರ ಪೈಕಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ 10 ಜನರು ನಾಪತ್ತೆಯಾಗಿದ್ದಾರೆ ಬಂಧಿಸಿರುವ 12 ಅಭ್ಯರ್ಥಿಗಳನ್ನು ಇಂದು ಪೊಲೀಸರು ಸಿಐಡಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.