ಬೆಂಗಳೂರು: PSI ನೇಮಕಾತಿ ಹಗರಣದಲ್ಲಿ ಬಂಧಿತರಾಗಿದ್ದ 12 ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಒಟ್ಟು 12 ಜನ ಆರೋಪಿಗಳಿಗೆ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಲಕ್ಷ್ಮೀನಾರಾಯಣ ಭಟ್ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಜಾಮೀನು ನಿರಾಕರಿಸಲಾಗಿದೆ.
ಜಾಗೃತ್, ಸೋಮನಾಥ, ರಘುವೀರ್, ಮಮತೇಶ್ ಗೌಡ, ಸಿ.ಎಂ.ನಾರಾಯಣ , ಆರ್. ಮಧು, ಸಿ.ಕೆ.ದಿಲೀಪ್ ಕುಮಾರ್, ರಚನಾ ಹಣಮಂತ, ಪ್ರವೀಣ್ ಕುಮಾರ್ ರಾಘವೇಂದ್ರ, ಮಧ್ಯವರ್ತಿಗಳಾದ ಕೇಶವಮೂರ್ತಿ ಮತ್ತು ಶರತ್ ಕುಮಾರ್ ಜಾಮೀನು ಪಡೆದವರಾಗಿದ್ದಾರೆ. ಪೊಲೀಸ್ ಇಲಾಖೆಯ ವಿಭಾಗಾಧಿಕಾರಿ ಆರ್. ಮಂಜುನಾಥ್ ಮತ್ತು ಬ್ಯಾಡರ ಹಳ್ಳಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹರೀಶ್ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಅರ್ಜಿದಾರರ ಪರವಾಗಿ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಎಸ್.ಶ್ಯಾಮ ಸುಂದರ್ ಮಂಡಿಸಿದ್ದರು.
ಸಿಐಡಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಹಗರಣದಿಂದ 55 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇದೊಂದು ಸಾಮಾಜಿಕ-ಆರ್ಥಿಕ ಅಪರಾಧ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪ್ರಕಾರ, ಈ ಆರೋಪಿಗಳು ಒಎಂಆರ್ ಶೀಟ್ ಸೇರಿದಂತೆ ಪರೀಕ್ಷಾ ದಾಖಲೆಗಳನ್ನು ತಿರುಚಿಸಿದ್ದಾರೆ. ಸಿಬಿಐ ಹೆಚ್ಚುವರಿ ತನಿಖೆ ನಡೆಸುತ್ತಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು’ ಎಂದು ಕೋರಿದ್ದರು.